ಮಡಿಕೇರಿ: ಕೊಡಗು (Kodagu) ಜಿಲ್ಲೆಯ ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ (Rain) ಮಳೆಯಾಗುತ್ತಿದೆ. ಪರಿಣಾಮ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಸುರಕ್ಷತಾ ಕ್ರಮವಾಗಿ ಹಾರಂಗಿ ಜಲಾಶಯದಿಂದ (Harangi Dam) ಕಾವೇರಿ ನದಿಗೆ 4 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.
ಹಾರಂಗಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಜಲಾಶಯಕ್ಕೆ ನಾಲ್ಕು ಸಾವಿರಕ್ಕೂ ಅಧಿಕ ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರ ಪರಿಣಾಮ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ ಕಾವೇರಿ ನದಿಗೆ 4 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಭಾರೀ ಗಾಳಿ ಮಳೆಗೆ ಮರ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ
ಹಾರಂಗಿ ಜಲಾಶಯದಿಂದ ಹೊರಬಿಡಲಾದ ನೀರು ಕುಡಿಗೆ ಸಮೀಪ ಕಾವೇರಿ ನದಿಯನ್ನು ಸೇರಿ, ಅಲ್ಲಿಂದ ಕೃಷ್ಣರಾಜಸಾಗರ ಜಲಾಶಯದತ್ತ ಹರಿಯಲಿದೆ. ಈ ಹಿನ್ನೆಲೆ ರೈತರು, ಸಾರ್ವಜನಿಕರು ನದಿಗೆ ಇಳಿಯದಂತೆ, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕೆಲವು ವಾರಗಳ ಹಿಂದೆ ಮಳೆಯ ಕೊರತೆಯಿಂದ ಕೊಡಗು, ಮೈಸೂರು ಹಾಗೂ ಹಾಸನ ಭಾಗದ ಜನರಲ್ಲಿ ಬರದ ಆತಂಕ ಮನೆ ಮಾಡಿತ್ತು. ಆದರೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದ ನದಿಗಳು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ರೈತರರಲ್ಲಿ ಮಂದಹಾಸ ಮೂಡಿಸಿದೆ. ಇದನ್ನೂ ಓದಿ: ಬೈರಸಂದ್ರದಲ್ಲಿ ಗಂಗರ ಕಾಲದ ಹುಲಿಬೇಟೆ ವೀರಗಲ್ಲು ಪತ್ತೆ – ಕ್ರಿ.ಶ 850ರ ಕಾಲಮಾನದ ಶಾಸನ ರಕ್ಷಣೆಗೆ ಒತ್ತಾಯ
