ಶಿವಮೊಗ್ಗ: ರಿಪ್ಪನ್‌ಪೇಟೆ (Ripponpet) ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೆಸಾನಿ ಗ್ರಾಮದ ಬಳಿ ಭಾರೀ (Rain) ಗಾಳಿ-ಮಳೆಯ ವೇಳೆ ಮರ ಮುರಿದು ಬಿದ್ದು ಕಾಲೇಜು ವಿದ್ಯಾರ್ಥಿನಿಯೊಬ್ಬಳು (Student) ಗಂಭೀರವಾಗಿ ಗಾಯಗೊಂಡಿದ್ದಾಳೆ.
ಹಿರೆಸಾನಿ ಗ್ರಾಮದ ಶೇಖರಪ್ಪ ಅವರ ಪುತ್ರಿ ನಿಖಿತಾ ಗಾಯಗೊಂಡ ವಿದ್ಯಾರ್ಥಿನಿ. ನಿಖಿತಾ ಗರ್ತಿಕೆರೆ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತಿದ್ದು, ತರಗತಿ ಮುಗಿಸಿ ಇಬ್ಬರು ಸ್ನೇಹಿತರೊಂದಿಗೆ ಶುಕ್ರವಾರ ಸಂಜೆ ಮನೆಗೆ ವಾಪಸ್ ಆಗುತ್ತಿದ್ದಾಗ ಈ ಅವಗಘಡ ಸಂಭವಿಸಿದೆ. ಇದನ್ನೂ ಓದಿ: ಹಾರಂಗಿ ಡ್ಯಾಮ್‌ನಿಂದ 5,000 ಕ್ಯೂಸೆಕ್ ನೀರು ಬಿಡುಗಡೆ ಸಾಧ್ಯತೆ – ಕಾವೇರಿ ನದಿಗೆ ಇಳಿಯದಂತೆ ಎಚ್ಚರಿಕೆ
ಮಾರ್ಗ ಮಧ್ಯೆ ಭಾರೀ ಗಾಳಿ ಮತ್ತು ಮಳೆಯ ಪರಿಣಾಮ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿರುವುದನ್ನು ಗಮನಿಸಿದ ಮೂವರು ವಿದ್ಯಾರ್ಥಿಗಳು ಸುರಕ್ಷತೆಗಾಗಿ ಹಿಂದಕ್ಕೆ ಸರಿದು ಓಡಲು ಮುಂದಾಗಿದ್ದಾರೆ. ಇದೇ ವೇಳೆ ರಸ್ತೆ ಬದಿಯಲ್ಲಿದ್ದ ದೊಡ್ಡ ಮರ ಏಕಾಏಕಿ ಉರುಳಿ ನಿಖಿತಾ ಅವರ ಮೇಲೆ ಬಿದ್ದಿದೆ.
ಘಟನೆಯ ಪರಿಣಾಮ ನಿಖಿತಾ ಅವರ ಎಡಗಾಲಿಗೆ ತೀವ್ರ ಪೆಟ್ಟಾಗಿದ್ದು, ಕಾಲು ಸಂಪೂರ್ಣವಾಗಿ ಮುರಿದಿರುವುದಾಗಿ ತಿಳಿದುಬಂದಿದೆ. ತೀವ್ರ ನೋವಿನಿಂದ ವಿದ್ಯಾರ್ಥಿನಿ ಕೂಗಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ತಕ್ಷಣವೇ ಧಾವಿಸಿ ರಕ್ಷಣೆ ನೀಡಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಗಾಯದ ತೀವ್ರತೆಯನ್ನು ಪರಿಗಣಿಸಿ ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಅಗತ್ಯವಿರುವುದರಿಂದ ಮಣಿಪಾಲ್ ಆಸ್ಪತ್ರೆಗೆ ರವಾನಿಸಲು ಸೂಚಿಸಿದರು. ಅದರಂತೆ ವಿದ್ಯಾರ್ಥಿನಿಯನ್ನು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಬೈರಸಂದ್ರದಲ್ಲಿ ಗಂಗರ ಕಾಲದ ಹುಲಿಬೇಟೆ ವೀರಗಲ್ಲು ಪತ್ತೆ – ಕ್ರಿ.ಶ 850ರ ಕಾಲಮಾನದ ಶಾಸನ ರಕ್ಷಣೆಗೆ ಒತ್ತಾಯ
