ಮಡಿಕೇರಿ: ಕಳೆದ ಒಂದು ವಾರದಿಂದ ಕೊಡಗು (Kodagu) ಜಿಲ್ಲೆಯಲ್ಲಿ ಉತ್ತಮ (Rain) ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯಕ್ಕೆ (Harangi Dam) ಒಳಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಭಾರೀ ಮಳೆಯಿಂದ ಜಲಾಶಯ ಶೀಘ್ರದಲ್ಲೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ. ಇದರಿಂದ ಇಂದು (ಜು.25) ಮಧ್ಯಾಹ್ನದ ವೇಳೆ ಕಾವೇರಿ ನದಿಗೆ ನೀರು ಹರಿಸುವ ಸಾಧ್ಯತೆ ಇದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ 3,000 ರಿಂದ 5,000 ಕ್ಯೂಸೆಕ್ ನೀರು ಹರಿಸುವ ಸಾಧ್ಯತೆ ಇದೆ. ಇದರಿಂದಾಗಿ ಸ್ಥಳೀಯರು ಮುನ್ನೆಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ – ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ
ನದಿ ತೀರದಲ್ಲಿ ಅನಗತ್ಯವಾಗಿ ಓಡಾಟ, ಮೀನುಗಾರಿಕೆ ಹಾಗೂ ನೀರಿಗೆ ಇಳಿಯಬಾರದು. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಸಾರ್ವಜನಿಕರು ಸ್ಥಳೀಯ ಆಡಳಿತದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಾವೇರಿ ನೀರಾವರಿ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ನದಿ ದಂಡೆಯಲ್ಲಿರುವ ಜಾನುವಾರುಗಳು, ಕೃಷಿ ಉಪಕರಣಗಳು ಹಾಗೂ ಇತರೆ ಆಸ್ತಿ-ಪಾಸ್ತಿಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಬೈರಸಂದ್ರದಲ್ಲಿ ಗಂಗರ ಕಾಲದ ಹುಲಿಬೇಟೆ ವೀರಗಲ್ಲು ಪತ್ತೆ – ಕ್ರಿ.ಶ 850ರ ಕಾಲಮಾನದ ಶಾಸನ ರಕ್ಷಣೆಗೆ ಒತ್ತಾಯ
