– ಬಿಡದಿ ಟೌನ್‌ಶಿಪ್ ಯೋಜನೆ; ಕುಮಾರಸ್ವಾಮಿ ಪರ-ವಿರುದ್ಧ ಘೋಷಣೆ
ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ (Bidadi Township) ವಿರೋಧಿಸಿ ಭೈರಮಂಗಲಕ್ಕೆ ಇಂದು ಭೇಟಿ ನೀಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರಿಗೆ ಸಿಹಿ ಮತ್ತು ಕಹಿ ಎರಡೂ ಅನುಭವ ಆಗಿದೆ. ಹೆಚ್‌ಡಿಕೆ ಪರ-ವಿರುದ್ಧ ರೈತರಿಂದ ಘೋಷಣೆ ಕೇಳಿಬಂದಿದೆ. ಯೋಜನೆ ವಿರುದ್ಧ ಇರುವ ರೈತರು ಹೆಚ್‌ಡಿಕೆ ಪರ ಮಾತನಾಡಿದರೆ, ಯೋಜನೆ ಪರ ಇರುವ ರೈತರು ಕೇಂದ್ರ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದರು.
ಹೆಚ್‌ಡಿಕೆ ಆಗಮನ ಹಿನ್ನೆಲೆಯಲ್ಲಿ ಎರಡೂ ಕಡೆಯ ರೈತರು ಭೈರಮಂಗಲದಲ್ಲಿ ಜಮಾಯಿಸಿದ್ದರು. ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ರೈತರ ಗಲಾಟೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮಾರ್ಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಇದನ್ನೂ ಓದಿ: ಧೈರ್ಯವಿದ್ದರೆ ನನ್ನ ಜೊತೆ ಭೈರಮಂಗಲಕ್ಕೆ ಬನ್ನಿ, ರೈತರ ಜೊತೆ ಮಾತನಾಡೋಣ – ಡಿಕೆಶಿಗೆ ಹೆಚ್‌ಡಿಕೆ ಸವಾಲು
ಭೈರಮಂಗಲಕ್ಕೆ ಕುಮಾರಸ್ವಾಮಿ ಆಗಮಿಸಿದ ಬೆನ್ನಲ್ಲೇ ಯೋಜನೆ ಪರ ಇರುವ ರೈತರು ಘೋಷಣೆ ಕೂಗಿದರು. ರೆಡ್ ಝೋನ್ ತೆಗೆಯಿರಿ ಎಂದು ಪೊಲೀಸರಿಗೆ ಒತ್ತಾಯಿಸಿದರು. ‘ರೆಡ್ ಝೋನ್ ಮಾಡಿದ ಕುಮಾರಸ್ವಾಮಿಗೆ ಧಿಕ್ಕಾರ. ರೆಡ್ ಝೋನ್ ಪಿತಾಮಹ ಕುಮಾರಸ್ವಾಮಿ. ಯೋಜನೆ ಮಾಡಿ ಈಗ ಬೇಡಾ ಎನ್ನುವ ಕುಮಾರಣ್ಣನಿಗೆ ಧಿಕ್ಕಾರ. ಬೇಕೆ ಬೇಕು ಅಕ್ವೇರ್ ಬೇಕೆಂದು’ ರೈತರು ಆಕ್ರೋಶ ಹೊರಹಾಕಿದರು. ನಮ್ಮ ಸ್ಥಳಕ್ಕೆ ಕುಮಾರಸ್ವಾಮಿ ಬರಲೇಬೇಕೆಂದು ಆಗ್ರಹಿಸಿದರು. ಕುಮಾರಸ್ವಾಮಿ ನಮ್ಮಿಂದ ಪಲಾಯನ ಆಗಿದ್ದಾರೆ. ಪೊಲೀಸರ ರಕ್ಷಣೆಯಲ್ಲಿ ಅವರು ಓಡಿ ಹೋಗಿದ್ದಾರೆ. ಕುಮಾರಸ್ವಾಮಿ ಓಡಿ ಹೋಗಿರೋದೆ ನಮಗೆ ವಿಜಯ ಎಂದು ಪ್ರತಿಭಟನಾಕಾರರು ಲೇವಡಿ ಮಾಡಿದರು.
ಈ ವೇಳೆ ಯೋಜನೆ ವಿರುದ್ಧ ಇದ್ದ ರೈತರು ಕುಮಾರಸ್ವಾಮಿ ಆಗಮನಕ್ಕೆ ಹರ್ಷೋದ್ಘಾರ ವ್ಯಕ್ತಪಡಿಸಿದರು. ಜೊತೆಗೆ ವಿರೋಧ ಇದ್ದ ರೈತರ ಜೊತೆ ಗಲಾಟೆಗೆ ಇಳಿದರು. ಎರಡೂ ಕಡೆಯ ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಇದನ್ನೂ ಓದಿ: ಹೆಚ್‌ಡಿಕೆ ಆರಂಭಿಸಿ, ಬಿಎಸ್‌ವೈ ಮುಂದುವರಿಸಿದ್ದ ಬಿಡದಿ ಯೋಜನೆ: ಡಿಕೆಶಿ ವಾಗ್ದಾಳಿ
