ಗಾಂಧೀನಗರ: ಗೋಹತ್ಯೆ (Cow Slaughter) ಪ್ರಕರಣದಲ್ಲಿ ಮೂವರು ವ್ಯಕ್ತಿಗಳಿಗೆ ಗಾಂಧೀನಗರ ಜಿಲ್ಲೆಯ ಕಲೋಲ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ತೀರ್ಪಿನಲ್ಲಿ ಮನುಸ್ಮೃತಿ ಹಾಗೂ ಇತರ ಮಹಾಕಾವ್ಯಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ಇಂತಹ ಕೃತ್ಯಗಳಿಗೆ ಕಾರಣರಾದವರನ್ನು ಕಾನೂನುಬದ್ಧವಾಗಿ ಶಿಕ್ಷಿಸದಿದ್ದರೆ ಗೋವುಗಳ ಸಂತತಿಯೇ ಅಳಿದುಹೋಗಬಹುದು ಎಂದು ಅಭಿಪ್ರಾಯಪಟ್ಟಿದೆ.
ಗುಜರಾತ್ ಸರ್ಕಾರವು 2011ರಲ್ಲಿ, ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ‘ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯಿದೆ, 1954’ಕ್ಕೆ ತಿದ್ದುಪಡಿ ತಂದಿತು. ಇದರ ಅಡಿಯಲ್ಲಿ ಗೋಹತ್ಯೆಯ ಮೇಲೆ ಸಂಪೂರ್ಣ ನಿಷೇಧ ಹೇರಲಾಯಿತು. ಗೋಮಾಂಸದ ಮಾರಾಟ, ಖರೀದಿ ಮತ್ತು ಸಾಗಾಟವನ್ನು ನಿಷೇಧಿಸಲಾಯಿತು. ಇದನ್ನೂ ಓದಿ: ಎಲ್ಎಸಿ ಗಡಿ ಉಲ್ಲಂಘನೆ ಹೊಸದೇನಲ್ಲ – ಅರುಣಾಚಲ ಸಿಎಂ ಪೆಮಾ ಖಂಡು
2017ರಲ್ಲಿ ಈ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಲಾಯಿತು. ಆ ಮೂಲಕ ಗೋಹತ್ಯೆಗೆ ಜೀವಾವಧಿ ಶಿಕ್ಷೆ ವಿಧಿಸುವ ಭಾರತದ ಮೊದಲ ರಾಜ್ಯವಾಗಿ ಗುಜರಾತ್ ಹೊರಹೊಮ್ಮಿತು. ತಿದ್ದುಪಡಿಗೊಂಡ ಈ ಕಾನೂನಿನ ಪ್ರಕಾರ, ಗೋಮಾಂಸವನ್ನು ಹೊಂದಿರುವುದು, ಮಾರಾಟ ಮಾಡುವುದು, ಸಂಗ್ರಹಿಸಿಡುವುದು ಅಥವಾ ಸಾಗಾಟ ಮಾಡುವುದಕ್ಕೆ ಏಳರಿಂದ ಹತ್ತು ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಇಂತಹ ಅಪರಾಧಗಳಿಗೆ ಜಾಮೀನು ಸಿಗುವುದಿಲ್ಲ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಿ.ಆರ್.ರಜಪೂತ್ ಅವರು ತೀರ್ಪು ನೀಡಿದ್ದಾರೆ. ಗೋವಿನ ಧಾರ್ಮಿಕ ಮಹತ್ವವನ್ನು ವಿವರಿಸಲು ಮನುಸ್ಮೃತಿ, ವೇದಗಳು ಮತ್ತು ಇತರ ಹಿಂದೂ ಧರ್ಮಗ್ರಂಥಗಳನ್ನು ಉಲ್ಲೇಖಿಸುವ 76 ಪುಟಗಳ ಈ ತೀರ್ಪು, ಗುರುವಾರ ಆನ್ಲೈನ್ನಲ್ಲಿ ಲಭ್ಯವಾಯಿತು.
ಆರೋಪಿಗಳು ತಾವು ಮಾಡುತ್ತಿರುವ ಕೃತ್ಯದ ಅರಿವಿದ್ದರೂ, ತಾಯಿಯ ಸ್ಥಾನದಲ್ಲಿ ಗೌರವಿಸಲ್ಪಡುವ ಗೋವುಗಳನ್ನು ಅತ್ಯಂತ ನಿರ್ದಯವಾಗಿ ಹತ್ಯೆ ಮಾಡಿದ್ದಾರೆ. ಅವರು ಗೋವುಗಳ ಬಾಯಿ, ಹೊಟ್ಟೆ, ಕಾಲುಗಳು ಮತ್ತು ಚರ್ಮವನ್ನು ಕತ್ತರಿಸಿ, ಮಾರಾಟಕ್ಕಾಗಿ 277 ಕೆ.ಜಿ.ಯಷ್ಟು ಗೋಮಾಂಸವನ್ನು ಹೊರತೆಗೆದಿದ್ದಾರೆ. ಗೋವುಗಳ ದೇಹದ ಭಾಗಗಳನ್ನು ಕತ್ತರಿಸಿ ಇಷ್ಟೊಂದು ಕ್ರೌರ್ಯ ಮೆರೆದವರಿಗೆ ಕಾನೂನುಬದ್ಧವಾಗಿ ಶಿಕ್ಷೆ ವಿಧಿಸದಿದ್ದರೆ, ಮುಂದೊಂದು ದಿನ ಭೂಮಿಯ ಮೇಲಿಂದ ‘ಗೋಮಾತೆ’ಯೇ ಸಂಪೂರ್ಣವಾಗಿ ಕಣ್ಮರೆಯಾಗಬಹುದು. ಆದ್ದರಿಂದ, ಕಾನೂನಿನ ಪ್ರಕಾರ ಆರೋಪಿಗಳಿಗೆ ಶಿಕ್ಷೆ ವಿಧಿಸುವುದು ಅಗತ್ಯವಾಗಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಮಗನ ಅಪಘಾತ ಕೇಸಲ್ಲಿ ಕೇರಳ ಜಡ್ಜ್ಗೆ ನಿರೀಕ್ಷಣಾ ಜಾಮೀನು
ಈ ಆದೇಶವು ಗೋವಿನ ಮಹತ್ವವನ್ನು ವಿವರಿಸಲು ಮನುಸ್ಮೃತಿ ಮತ್ತು ಇತರ ಧಾರ್ಮಿಕ ಗ್ರಂಥಗಳನ್ನು ಉಲ್ಲೇಖಿಸಿದೆ. ಮನುಸ್ಮೃತಿಯಲ್ಲಿ ಗೋವನ್ನು ಕೇವಲ ಒಂದು ಪ್ರಾಣಿಯನ್ನಾಗಿ ಮಾತ್ರವಲ್ಲದೆ, ಧಾರ್ಮಿಕ ಕರ್ತವ್ಯದ ಒಂದು ಆಧಾರಸ್ತಂಭವನ್ನಾಗಿ ಪರಿಗಣಿಸಲಾಗಿದೆ ಎಂದು ಅದು ಗಮನಿಸಿದೆ. ಅಲ್ಲದೆ, ಪಶುಸಂಪತ್ತನ್ನು ರಕ್ಷಿಸುವ ಪ್ರಮುಖ ಜವಾಬ್ದಾರಿಯನ್ನು ಮನು ಮಹರ್ಷಿಗಳು ವೈಶ್ಯ ವರ್ಗಕ್ಕೆ ವಹಿಸಿಕೊಟ್ಟಿದ್ದರು ಎಂದು ಅದು ತಿಳಿಸಿದೆ.
