ತಿರುವನಂತಪುರ: ಕೇರಳದ (Kerala) ಕೊಚ್ಚಿಯಲ್ಲಿ (Kochi) 17 ವರ್ಷದ ಅಪ್ರಾಪ್ತ ಮಗನಿಂದ ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವು ಪ್ರಕರಣದಲ್ಲಿ ಆರೋಪಿಯಾಗಿರುವ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ಕೇರಳ ಹೈಕೋರ್ಟ್ (Kerala High Court) ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಾರು ನ್ಯಾಯಾಧೀಶರ ಹೆಸರಿನಲ್ಲಿ ನೋಂದಣಿಯಾಗಿದ್ದು, ಮೋಟಾರು ವಾಹನ ಕಾಯ್ದೆಯಡಿ ತಂದೆಯನ್ನೂ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ. ಅಪಘಾತದ ವೇಳೆ ಮಗ ಕಾರು ತೆಗೆದುಕೊಂಡು ಹೋಗಿರುವುದು ತನಗೆ ತಿಳಿದಿರಲಿಲ್ಲ ಎಂದು ನ್ಯಾಯಾಧೀಶರ ವಾದವಾಗಿದೆ. ಇದನ್ನೂ ಓದಿ: ಜಡ್ಜ್ ಪುತ್ರನ ಮರ್ಸಿಡಿಸ್ ಕಾರು ಹಿಟ್ & ರನ್ ಕೇಸ್; ತನಿಖೆಯಲ್ಲಿ ಲೋಪ ಆರೋಪಕ್ಕೆ ಕೊಚ್ಚಿ ಪೊಲೀಸ್ ಕಮಿಷನರ್ ಎತ್ತಂಗಡಿ
ವಿಚಾರಣೆಗೆ ಸಹಕರಿಸುವುದಾಗಿ ನ್ಯಾಯಾಧೀಶರು ಹೇಳಿರುವ ಹಿನ್ನೆಲೆ ಬಂಧನದ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು (Anticipatory Bail) ಮಂಜೂರು ಮಾಡಿದೆ.
ಆಗಿದ್ದೇನು?
ಭಾನುವಾರ (ಅ.25) ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕೊಚ್ಚಿಯ ಚೆರಾನೆಲ್ಲೂರು ಸಮೀಪದ ಕಂಟೈನರ್ ರಸ್ತೆಯಲ್ಲಿ ಘಟನೆ ಸಂಭವಿಸಿತ್ತು. ನ್ಯಾಯಾಧೀಶರ 17 ವರ್ಷದ ಮಗ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆನ್ಜ್ ಕಾರು ಸ್ಕೂಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಚಿತ್ತೂರು ಮಂಜಲಿ ನಿವಾಸಿ 54 ವರ್ಷದ ಮೃತ ಜಯಬಾಲಕೃಷ್ಣನ್ ಮೃತಪಟ್ಟಿದ್ದರು. ಮೃತ ಜಯಬಾಲಕೃಷ್ಣನ್ ತಮ್ಮ ಸಣ್ಣ ಚಹಾ ಅಂಗಡಿಯನ್ನು ಮುಚ್ಚಿ ಮನೆಗೆ ಮರಳುತ್ತಿದ್ದ ವೇಳೆ ಜಡ್ಜ್ ಮಗ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಝ್ ಕಾರು ಗುದ್ದಿದೆ.
ಸ್ವತಃ ಬಾಲಕ, ಪೋಷಕರ ಒಪ್ಪಿಗೆಯಿಲ್ಲದೆ ತಾನೇ ಕಾರು ತೆಗೆದುಕೊಂಡು ಬಂದಿದ್ದಾಗಿ ಹೇಳಿಕೆ ನೀಡಿದ್ದಾನೆ. ಆರಂಭದಲ್ಲಿ ನಿರ್ಲಕ್ಷ್ಯದಿಂದ ಸಾವು ಪ್ರಕರಣ ದಾಖಲಿಸಲಾಗಿತ್ತು. ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗಳ ನಂತರ, ಪೊಲೀಸರು ಸೆಕ್ಷನ್ 105 ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸಿ ಬಾಲಕನನ್ನು ಮತ್ತೆ ವಶಕ್ಕೆ ಪಡೆದಿದ್ದರು. ಈಗಾಗಲೇ ಅಪ್ರಾಪ್ತ ಬಾಲಕನಿಗೆ ಜಾಮೀನು ಸಿಕ್ಕಿದೆ.ಇದನ್ನೂ ಓದಿ: ನ್ಯಾಯಾಧೀಶರ ಅಪ್ರಾಪ್ತ ಮಗನಿಂದ ಅಪಘಾತ – ಜಡ್ಜ್ ವಿರುದ್ಧ ದೂರು ದಾಖಲಿಸಲು ಕೇರಳ ಹೈಕೋರ್ಟ್ ಅನುಮತಿ
