ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ʻಜನರೊಂದಿಗೆ ಜನತಾದಳ ಸಮಾವೇಶʼದ ಫ್ಲೆಕ್ಸ್‌ನಲ್ಲಿ ಶಾಸಕ ಜಿ.ಟಿ ದೇವೇಗೌಡ (GT Deve Gowda) ಹಾಗೂ ಹೆಚ್.ಡಿ ರೇವಣ್ಣರ (H.D Revanna) ಫೋಟೋಗೆ ಕೋಕ್ ನೀಡಲಾಗಿದೆ. ಅವರ ಪುತ್ರ ಶಾಸಕ ಜಿ.ಡಿ ಹರೀಶ್ (J.D Hareesh) ಫೋಟೋ ಬ್ಯಾನರ್‌ನಲ್ಲಿ ರಾರಾಜಿಸಿದೆ.
ಸ್ಥಳೀಯ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರ ಅನುಪಸ್ಥಿತಿಯಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಶಾಸಕ ಜಿ.ಟಿ ದೇವೇಗೌಡ ಜೊತೆ ಅಂತರ ಕಾಯ್ದುಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ.ಕುಮಾರಸ್ವಾಮಿಯವರು (H.D Kumaraswamy), ಜಿ.ಡಿ ಹರೀಶ್ ಗೌಡ ಅವರ ಜೊತೆ ಸಂಬಂಧ ಗಟ್ಟಿ ಮಾಡಿಕೊಳ್ಳುತ್ತಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಸಮಾವೇಶದಲ್ಲಿ ಮಾತಾಡಿದ ಹೆಚ್‍ಡಿಕೆಯವರು, 2006ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ನಮ್ಮ ಸಣ್ಣ ಪುಟ್ಟ ತಪ್ಪಿನಿಂದ ಜೆಡಿಎಸ್ ಸೋತಿತು. 2006ರ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದ್ದರೆ ಕರ್ನಾಟಕಕ್ಕೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ. ಸಿಎಂ ಸಿದ್ದರಾಮಯ್ಯ ಮಾಡಿದ್ದಕ್ಕಿಂತ ಹೆಚ್ಚಿನ ಅಭಿವೃದ್ಧಿ ಕೆಲಸವನ್ನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನು ಮಾಡಿದ್ದೇನೆ. ಕುರುಬು ಸಮುದಾಯ ಜೆಡಿಎಸ್ ಜೊತೆ ಇದೆ ಎಂದು ಅರಿಶಿಣ ಬಣ್ಣದ ರುಮಾಲು ಧರಿಸಿದ್ದೇನೆ. ಕುರುಬ ಸಮುದಾಯ ತಮ್ಮನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ ಎಂದು ಸಿಎಂಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಡಿಸೇಲ್ – ಪೆಟ್ರೋಲ್ ಜಾಸ್ತಿ ಆಗಿದ್ದು, ಇದಕ್ಕೆ ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದಾರೆ. ರಾಜ್ಯ ಸರ್ಕಾರ ವಿದ್ಯುತ್ ದರ, ಬಸ್ ದರ, ಮದ್ಯದ ದರ ಎಷ್ಟು ಬಾರಿ ಹೆಚ್ಚು ಮಾಡಿದ್ದಾರೆ ಎಂದು ಹೇಳಲಿ. ರಾಜ್ಯ ಸರ್ಕಾರ ಯಾವ ಸಾಧನೆಗೆ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದರು.

