ಬೆಂಗಳೂರು: ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಗುಬ್ಬಿ ಬಳಿಯ ‘ಹೋಮ್ ಆಫ್ ಹೋಪ್’ ನಿರಾಶ್ರಿತರ ಆಶ್ರಮದಲ್ಲಿ ಇರಿಸಲಾಗಿದ್ದ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ನಾಲ್ವರು ಉಗಾಂಡ ಮಹಿಳೆಯರು (Uganda Women) ಪೊಲೀಸರ ಬಿಗಿ ಬಂದೋಬಸ್ತ್ ನಡುವೆಯೂ ಪರಾರಿಯಾಗಿದ್ದಾರೆ.
ಮೇ 11ರಂದು ಮುಂಜಾನೆ 3 ಗಂಟೆ ಸುಮಾರಿಗೆ ಆಶ್ರಮದ ಎರಡನೇ ಅಂತಸ್ತಿನ ಕಿಟಕಿಯ ಗ್ರಿಲ್ ಮುರಿದು ತಪ್ಪಿಸಿಕೊಂಡಿದ್ದಾರೆ. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಮದ್ಯ, ಬಿಯರ್ ದರ ಪರಿಷ್ಕರಣೆ – ಯಾವ ಬ್ರ್ಯಾಂಡ್ ಬೆಲೆ ಎಷ್ಟು?
ಪರಾರಿಯಾದ ಮಹಿಳೆಯರು ಉಗಾಂಡ ಮತ್ತು ನೈಜೀರಿಯಾ ಮೂಲದವರಾಗಿದ್ದು, ಅವರ ವೀಸಾ ಅವಧಿ ಮುಗಿದಿದ್ದರೂ ದೇಶಕ್ಕೆ ಮರಳದೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಉಗಾಂಡದ ತೋಪಿಷ್ಟ, ನಗವ, ಸಫಿನಾ ಮತ್ತು ಪಿತೀನ ಎಂಬ ಮಹಿಳೆಯರು ತಪ್ಪಿಸಿಕೊಂಡವರಲ್ಲಿ ಸೇರಿದ್ದಾರೆ. ಈ ಅಕ್ರಮ ವಲಸಿಗರನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅಧಿಕಾರಿಗಳು ವಶಕ್ಕೆ ಪಡೆದು, ತಮ್ಮ ಜೈಲಿನಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ‘ಹೋಮ್ ಆಫ್ ಹೋಪ್’ ಆಶ್ರಮದಲ್ಲಿ ಇರಿಸಿದ್ದರು.
ಈ ಮಹಿಳೆಯರು ಈಗಾಗಲೇ ಗಾಂಜಾ, ಡ್ರಗ್ಸ್ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಆಶ್ರಮದಲ್ಲಿ ಇರಿಸಿದ್ದಾಗಲೂ ಅವರ ಬಳಿ ಗಾಂಜಾ ಮತ್ತು ಡ್ರಗ್ಸ್ ಪತ್ತೆಯಾಗಿತ್ತು. ಇದೀಗ ಅವರು ಪರಾರಿಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಯ ಬಗ್ಗೆ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.

