ಕೊಪ್ಪಳ: ಇಲ್ಲಿನ ತಾಲೂಕಿನ ಐತಿಹಾಸಿಕ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದ (Huligemme Temple) ಬಳಿಯ ತುಂಗಭದ್ರಾ ನದಿಯಲ್ಲಿ (Tungabhadra River) ಅದ್ಧೂರಿ ತುಂಗಾರತಿ ನಡೆದಿದೆ.
ಕಾಶಿಯಲ್ಲಿ ನಡೆಯುವ ಗಂಗಾರತಿಯ (Gangarathi) ಮಾದರಿಯಲ್ಲಿ ತುಂಗಭದ್ರಾ ನದಿಗೆ ತುಂಗಾರತಿ (Tungarathi) ಕಾರ‍್ಯಕ್ರಮ ನಡೆಸಲಾಯಿತು. ಹುಲಿಗಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದಿಂದ ತುಂಗಭದ್ರಾ ಆರತಿ ಮಹೋತ್ಸವ ಆಯೋಜನೆ ಮಾಡಲಾಗಿದ್ದು, ಈ ಕಾರ‍್ಯಕ್ರಮಕ್ಕೆ ಮುಜರಾಯಿ ಇಲಾಖೆ ಸಚಿವ ಕೆಎಸ್ ಬಸವಂತಪ್ಪ ಚಾಲನೆ ನೀಡಿದರು. ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ಬೆಂಗಳೂರು ನಿವಾಸದ ಮೇಲೆ ಇ.ಡಿ ದಾಳಿ

ವಾರಣಾಸಿಯಿಂದ ಆಗಮಿಸಿದ್ದ ರಣಧೀರ ಆಚಾರ ನೇತೃತ್ವದ 11 ನುರಿತ ಅರ್ಚಕರ ತಂಡವು ಶಾಸ್ತ್ರೋಕ್ತವಾಗಿ, ಮಂತ್ರ ಘೋಷಗಳೊಂದಿಗೆ ತುಂಗಭದ್ರಾ ನದಿಗೆ ಮಹಾಮಂಗಳಾರತಿ ನೆರವೇರಿಸಿತು. ದೀಪಗಳ ಝಗಮಗಿಸುವ ಬೆಳಕು ಮತ್ತು ವೇದಘೋಷಗಳು ಭಕ್ತರಿಗೆ ಕಾಶಿಯ ಗಂಗಾತೀರದಲ್ಲೇ ಇರುವಂತಹ ದಿವ್ಯ ಅನುಭವವನ್ನು ಕಟ್ಟಿಕೊಟ್ಟವು.
ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಅವಧೂತ ವಿನಯ ಗುರೂಜಿ, ತುಂಗಾರತಿ ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ರು. ಗದಗ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ್ ಹಿಟ್ನಾಳ ಸಾಥ್ ನೀಡಿದ್ರು. ನದಿಯಲ್ಲಿ ಹುಲಿಗೆಮ್ಮ ದೇವಿಯ ಮೂರ್ತಿಯನ್ನ ಪಲ್ಲಕ್ಕಿಯಲ್ಲಿ ಇಟ್ಟು, ಅರ್ಚಕರು ತುಂಗಭದ್ರಾ ನದಿಗೆ ಆರತಿ ಮಾಡುವ ಮೂಲಕ ದೇವಿಯಲ್ಲಿ ಪಾರ್ಥನೆ ಮಾಡಿದರು. ಇದನ್ನೂ ಓದಿ: ಭಾರತದ 7.8% ಜಿಡಿಪಿ ಬೆಳವಣಿಗೆ ವಿಶ್ವಕ್ಕೆ ಹೊಸ ಭರವಸೆ – ಪ್ರಧಾನಿ ಮೋದಿ
