ಭಾರತೀಯ ನೌಕಾಪಡೆಯ ಸಮುದ್ರದಾಳದ ಕಾರ್ಯಾಚರಣೆ ಮತ್ತು ಸಬ್ಮರೀನ್ ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ಬಂದಿದೆ. ಅತ್ಯಾಧುನಿಕ ಡೈವಿಂಗ್ ಹಾಗೂ ನೀರಿನಾಳದ ರಕ್ಷಣಾ ಕಾರ್ಯಾಚರಣೆಗಳಿಗಾಗಿ ನಿರ್ಮಿಸಲಾಗಿರುವ INS ನಿಪುಣ್ (INS Nipun) ಭಾರತೀಯ ನೌಕಾಪಡೆಗೆ (Indian Navy) ಸೇರ್ಪಡೆಯಾಗಿದೆ. ಇದು ಸಾಮಾನ್ಯ ಯುದ್ಧನೌಕೆಯಲ್ಲ. ಆಳ ಸಮುದ್ರದಲ್ಲಿ ಡೈವಿಂಗ್, ನೀರಿನಾಳದ ಪರಿಶೀಲನೆ, ರಕ್ಷಣಾ ಕಾರ್ಯಾಚರಣೆ ಮತ್ತು ಸಬ್ಮರೀನ್ಗಳಿಗೆ ತುರ್ತು ನೆರವು ನೀಡುವಂತಹ ವಿಶೇಷ ಉದ್ದೇಶಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ಹಾಗಿದ್ರೆ INS ನಿಪುಣ್ ವಿಶೇಷತೆಗಳೇನು? ಸಬ್ ಮರೀನ್ ರಕ್ಷಣೆ ಹೇಗೆ ಮಾಡುತ್ತದೆ? ಭಾರತೀಯ ನೌಕಾಪಡೆಗೆ ಇದು ಏಕೆ ಮಹತ್ವದ್ದು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
INS ನಿಪುಣ್ ಎಂದರೇನು?
INS ನಿಪುಣ್ ಒಂದು Diving Support Vessel (DSV). ಸರಳವಾಗಿ ಹೇಳುವುದಾದರೆ, ಸಮುದ್ರದಾಳದಲ್ಲಿ ಕಾರ್ಯನಿರ್ವಹಿಸುವ ಡೈವರ್ಗಳು ಮತ್ತು ರಕ್ಷಣಾ ವ್ಯವಸ್ಥೆಗಳಿಗೆ ಸಮುದ್ರದ ಮೇಲ್ಮೈಯಿಂದ ಸಂಪೂರ್ಣ ಬೆಂಬಲ ನೀಡುವ ವಿಶೇಷ ಹಡಗು ಇದು. ಆಳ ಸಮುದ್ರದಲ್ಲಿ ಮನುಷ್ಯರು ಮತ್ತು ವಿಶೇಷ ಉಪಕರಣಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ತಾಂತ್ರಿಕ ವ್ಯವಸ್ಥೆಗಳನ್ನು ಈ ಹಡಗು ಹೊಂದಿದೆ.
Nistar ವರ್ಗದ ಎರಡನೇ ಹಡಗು:
INS Nipun, ಭಾರತೀಯ ನೌಕಾಪಡೆಯ Nistar ವರ್ಗದ ಎರಡನೇ ಡೈವಿಂಗ್ ಸಹಾಯಕ ನೌಕೆ ಆಗಿದೆ. ಈ ವರ್ಗದ ಮೊದಲ ಹಡಗು INS Nistar ಆಗಿದ್ದು, ಎರಡೂ ಹಡಗುಗಳು ಭಾರತದ ನೀರಿನಾಳದ ಕಾರ್ಯಾಚರಣೆ ಮತ್ತು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಿವೆ.
ಭಾರತದಲ್ಲೇ ನಿರ್ಮಾಣ:
INS ನಿಪುಣ್ ಅನ್ನು ಹಿಂದೂಸ್ಥಾನ್ ಶಿಪ್ಯಾರ್ಡ್ ಲಿಮಿಟೆಡ್ (HSL), ವಿಶಾಖಪಟ್ಟಣ ದೇಶೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಿದೆ. ಇದು ಭಾರತದ ರಕ್ಷಣಾ ಹಡಗು ನಿರ್ಮಾಣ ಸಾಮರ್ಥ್ಯಕ್ಕೆ ಮತ್ತೊಂದು ಪ್ರಮುಖ ಉದಾಹರಣೆಯಾಗಿದೆ. ಹಡಗಿನಲ್ಲಿ ಹೆಚ್ಚಿನ ಪ್ರಮಾಣದ ದೇಶೀಯ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಲಾಗಿದ್ದು, ಆತ್ಮನಿರ್ಭರ ಭಾರತದ ರಕ್ಷಣಾ ಕ್ಷೇತ್ರದ ಗುರಿಗೆ ಇದು ಕೊಡುಗೆ ನೀಡುತ್ತದೆ.
ಡೀಪ್ ಸೀ ಡೈವಿಂಗ್ಗೆ ವಿಶೇಷ ಸಾಮರ್ಥ್ಯ:
INS ನಿಪುಣ್ನ ಪ್ರಮುಖ ಸಾಮರ್ಥ್ಯಗಳಲ್ಲಿ ಒಂದು ಆಳ ಸಮುದ್ರ ಕಾರ್ಯಾಚರಣೆ. ಸಮುದ್ರದ ಆಳ ಹೆಚ್ಚಾದಂತೆ ನೀರಿನ ಒತ್ತಡವೂ ಹೆಚ್ಚಾಗುತ್ತದೆ. ಹೀಗಾಗಿ ಹೆಚ್ಚಿನ ಆಳದಲ್ಲಿ ಡೈವಿಂಗ್ ಮಾಡುವುದು (Deep Sea Diving) ಸಾಮಾನ್ಯ ಡೈವಿಂಗ್ಗಿಂತ ಹೆಚ್ಚು ಅಪಾಯಕಾರಿ. ಈ ಸವಾಲುಗಳನ್ನು ಎದುರಿಸಲು ನಿಪುಣ್ನಲ್ಲಿ ವಿಶೇಷ ಡೈವಿಂಗ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
ಸ್ಯಾಚುರೇಶನ್ ಡೈವಿಂಗ್ ಎಂದರೇನು?
INS ನಿಪುಣ್ನಲ್ಲಿ ಡೀಪ್ ಸೀ ಸ್ಯಾಚುರೇಶನ್ ಡೈವಿಂಗ್ ಸಾಮರ್ಥ್ಯವೂ ಇದೆ. ಸ್ಯಾಚುರೇಶನ್ ಡೈವಿಂಗ್ಎನ್ನುವುದು ಆಳ ಸಮುದ್ರದಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸಲು ಬಳಸುವ ಅತ್ಯಾಧುನಿಕ ಡೈವಿಂಗ್ ವಿಧಾನ. ಡೈವರ್ಗಳನ್ನು ನಿಯಂತ್ರಿತ ಒತ್ತಡದ ವಾತಾವರಣದಲ್ಲಿ ಇರಿಸಿ, ಅಗತ್ಯವಿರುವ ಅವಧಿಯವರೆಗೆ ನೀರಿನಾಳದಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ. ಇದರಿಂದ ಪ್ರತೀ ಬಾರಿ ಸಮುದ್ರದ ಮೇಲ್ಮೈಗೆ ಬಂದು ಮತ್ತೆ ಆಳಕ್ಕೆ ಇಳಿಯುವ ಅಗತ್ಯ ಕಡಿಮೆಯಾಗುತ್ತದೆ.
ROVಗಳ ಬಳಕೆ:
ಮನುಷ್ಯರನ್ನು ನೇರವಾಗಿ ಸಮುದ್ರದಾಳಕ್ಕೆ ಕಳುಹಿಸುವುದು ಅಪಾಯಕಾರಿ ಎನ್ನುವ ಸಂದರ್ಭಗಳಲ್ಲಿ Remotely Operated Vehicles (ROVs) ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳನ್ನು ಹಡಗಿನ ಮೇಲಿನಿಂದಲೇ ನಿಯಂತ್ರಿಸಬಹುದು. ಮುಳುಗಿದ ಹಡಗುಗಳು, ನೀರಿನಾಳದ ರಚನೆಗಳು ಮತ್ತು ಅಪಾಯಕಾರಿ ಪ್ರದೇಶಗಳನ್ನು ಪರಿಶೀಲಿಸಲು ROVಗಳನ್ನು ಬಳಸಬಹುದು. ಇದರಿಂದ ಮಾನವ ಡೈವರ್ಗಳ ಅಪಾಯವನ್ನು ಕಡಿಮೆ ಮಾಡಬಹುದು.
ಸಬ್ಮರೀನ್ ಅಪಘಾತದಲ್ಲಿ ನಿಪುಣ್ ಪಾತ್ರ:
ನಿಪುಣ್ನ ಅತ್ಯಂತ ಪ್ರಮುಖ ಉದ್ದೇಶಗಳಲ್ಲಿ ಸಬ್ಮರೀನ್ ರಕ್ಷಣೆ ಕೂಡ ಒಂದಾಗಿದೆ. ಸಮುದ್ರದಾಳದಲ್ಲಿ ಸಬ್ಮರೀನ್ ತಾಂತ್ರಿಕ ದೋಷ ಅಥವಾ ಅಪಘಾತದಿಂದ ಸಿಲುಕಿಕೊಂಡರೆ, ಅದರಲ್ಲಿರುವ ಸಿಬ್ಬಂದಿಯನ್ನು ರಕ್ಷಿಸುವುದು ಅತ್ಯಂತ ಕಷ್ಟಕರ ಕಾರ್ಯ. ಇಂತಹ ಸಂದರ್ಭದಲ್ಲಿ ನಿಪುಣ್ ಪ್ರಮುಖ ಸಪೋರ್ಟ್ ಪ್ಲಾಟ್ಫಾರ್ಮ್ ಆಗಿ ಕಾರ್ಯನಿರ್ವಹಿಸಬಲ್ಲದು.
ಸಬ್ಮರೀನ್ ರಕ್ಷಣೆಯಲ್ಲಿ Deep Submergence Rescue Vessel (DSRV) ಅತ್ಯಂತ ಪ್ರಮುಖ ಸಾಧನ. ಇದು ಸಮುದ್ರದಾಳಕ್ಕೆ ತೆರಳಿ ಅಪಘಾತಕ್ಕೀಡಾದ ಸಬ್ಮರೀನ್ಗೆ ಸಂಪರ್ಕ ಸಾಧಿಸಿ, ಅದರೊಳಗಿನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆದುಕೊಳ್ಳಲು ನೆರವಾಗುತ್ತದೆ. INS ನಿಪುಣ್ ಇಂತಹ DSRVಗಳನ್ನು ಕಾರ್ಯಾಚರಣೆಯ ಪ್ರದೇಶಕ್ಕೆ ಕೊಂಡೊಯ್ಯುವ ಮತ್ತು ಅವುಗಳ ಕಾರ್ಯಾಚರಣೆಗೆ ಅಗತ್ಯವಿರುವ ಬೆಂಬಲ ಒದಗಿಸುತ್ತದೆ.
650 ಮೀಟರ್ ಆಳದವರೆಗೆ ರಕ್ಷಣಾ ಸಾಮರ್ಥ್ಯ:
ಭಾರತೀಯ ನೌಕಾಪಡೆಯ ಸಬ್ಮರೀನ್ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ DSRV ಸುಮಾರು 650 ಮೀಟರ್ ಆಳದವರೆಗೆ ರಕ್ಷಣಾ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ವರದಿಯಾಗಿದೆ. ಇಂತಹ ರಕ್ಷಣಾ ವಾಹನಕ್ಕೆ ಸಮುದ್ರದ ಮೇಲ್ಮೈಯಿಂದ ಸೂಕ್ತ ಬೆಂಬಲ ನೀಡಲು ನಿಪುಣ್ನಂತಹ ಹಡಗುಗಳು ಬಹಳ ಮುಖ್ಯ.
Dynamic Positioning ವ್ಯವಸ್ಥೆ:
ಸಮುದ್ರದಲ್ಲಿ ಹಡಗನ್ನು ಒಂದೇ ಸ್ಥಳದಲ್ಲಿ ಸ್ಥಿರವಾಗಿ ನಿಲ್ಲಿಸುವುದು ಸುಲಭವಲ್ಲ. ಅಲೆಗಳು, ಗಾಳಿ ಮತ್ತು ಸಮುದ್ರದ ಪ್ರವಾಹಗಳು ಹಡಗಿನ ಸ್ಥಾನವನ್ನು ಬದಲಾಯಿಸುತ್ತವೆ. ನಿಪುಣ್ನಲ್ಲಿ Dynamic Positioning ಸೇರಿದಂತೆ ನಿಖರವಾದ Station-keeping ವ್ಯವಸ್ಥೆಗಳಿರುವುದರಿಂದ, ಡೈವಿಂಗ್ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುವ ಸಂದರ್ಭದಲ್ಲಿ ಹಡಗನ್ನು ಅಗತ್ಯವಿರುವ ಪ್ರದೇಶದಲ್ಲಿ ಸ್ಥಿರವಾಗಿ ನಿಲ್ಲಿಸಲು ಸಾಧ್ಯವಾಗುತ್ತದೆ.
Hyperbaric Lifeboat ಮತ್ತು ವೈದ್ಯಕೀಯ ಸೌಲಭ್ಯ
ಆಳ ಸಮುದ್ರದ ಡೈವಿಂಗ್ ನಂತರ ಡೈವರ್ಗಳನ್ನು ಸುರಕ್ಷಿತವಾಗಿ ಮೇಲಕ್ಕೆ ತರುವುದು ಕೂಡ ಮಹತ್ವದ ಸವಾಲು. ನೀರಿನ ಒತ್ತಡದಲ್ಲಿ ದೀರ್ಘಕಾಲ ಇದ್ದ ನಂತರ ಒತ್ತಡವನ್ನು ನಿಯಂತ್ರಿತವಾಗಿ ಕಡಿಮೆ ಮಾಡಬೇಕಾಗುತ್ತದೆ. ಇದಕ್ಕಾಗಿ INS ನಿಪುಣ್ನಲ್ಲಿ Hyperbaric support ವ್ಯವಸ್ಥೆಗಳಿದೆ. ಆಳ ಸಮುದ್ರದಲ್ಲಿ ಹೆಚ್ಚಿನ ಒತ್ತಡದ ಪರಿಸರದಲ್ಲಿ ಕಾರ್ಯನಿರ್ವಹಿಸುವ ಡೈವರ್ಗಳನ್ನು ಸುರಕ್ಷಿತವಾಗಿ ಮೇಲ್ಮೈಗೆ ತರಲು ಹಾಗೂ ಒತ್ತಡಕ್ಕೆ ಸಂಬಂಧಿಸಿದ ತುರ್ತು ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು ಈ ವ್ಯವಸ್ಥೆ ನೆರವಾಗುತ್ತದೆ.
ನಿಪುಣ್ ಕೇವಲ ಸಬ್ಮರೀನ್ ರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ. ಸಮುದ್ರದಲ್ಲಿ ಮುಳುಗಿದ ಹಡಗುಗಳು ಅಥವಾ ಇತರ ಭಾರೀ ವಸ್ತುಗಳನ್ನು ಪತ್ತೆಹಚ್ಚುವುದು, ಪರಿಶೀಲಿಸುವುದು ಮತ್ತು ಅಗತ್ಯವಿದ್ದರೆ ಅವುಗಳನ್ನು ಮೇಲಕ್ಕೆತ್ತುವ ನೀರಿನಾಳದ ರಕ್ಷಣಾ ಕಾರ್ಯಾಚರಣೆಗಳಲ್ಲೂ ಇದು ನೆರವಾಗಬಹುದು.
ಪೂರ್ವ ಮತ್ತು ಪಶ್ಚಿಮ ಕರಾವಳಿಗೆ ಹೆಚ್ಚಿದ ಸಾಮರ್ಥ್ಯ:
INS ನಿಸ್ತಾರ್ ಮತ್ತು INS ನಿಪುಣ್ ಎಂಬ ಎರಡು ಡೈವಿಂಗ್ ಸಹಾಯಕ ನೌಕೆಗಳ ಲಭ್ಯತೆಯಿಂದ ಭಾರತದ ಪ್ರಮುಖ ಪೂರ್ವ ಮತ್ತು ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಆಳಸಮುದ್ರ ರಕ್ಷಣಾ ಕಾರ್ಯಾಚರಣೆಗಳಿಗೆ ಹೆಚ್ಚಿನ ಮಹತ್ವ ಸಿಗಲಿದೆ.
ಭಾರತದ ಸಮುದ್ರ ಭದ್ರತೆಗೆ ಏಕೆ ಮಹತ್ವದ್ದು?
ಭಾರತದ ಸಮುದ್ರ ಹಿತಾಸಕ್ತಿಗಳು ಹಿಂದೂ ಮಹಾಸಾಗರ ಪ್ರದೇಶದಲ್ಲಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ನೀರಿನಾಳದ ಸಾಮರ್ಥ್ಯ ಅತ್ಯಂತ ಮಹತ್ವ ಪಡೆದುಕೊಂಡಿದೆ. ಸಬ್ಮರೀನ್ಗಳು ಆಧುನಿಕ ನೌಕಾಪಡೆಯ ಪ್ರಮುಖ ಭಾಗವಾಗಿರುವುದರಿಂದ, ಅವುಗಳಿಗೆ ತುರ್ತು ಪರಿಸ್ಥಿತಿಯಲ್ಲಿ ರಕ್ಷಣಾ ನೆರವು ನೀಡುವ ವ್ಯವಸ್ಥೆಯೂ ಬಲವಾಗಿರಬೇಕು. INS ನಿಪುಣ್ ಈ ಅಗತ್ಯವನ್ನು ಪೂರೈಸುವ ಪ್ರಮುಖ ವೇದಿಕೆಗಳಲ್ಲಿ ಒಂದಾಗಿದೆ.
