ಗೋಲ್ಡನ್ ಸ್ಟಾರ್ ಗಣೇಶ್ ( Golden Star Ganesh ) ಅಭಿನಯದ ಬಹುನಿರೀಕ್ಷಿತ ‘ಪಿನಾಕ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ಗಣೇಶ್ ಅವರ ಹೊಸ ಅವತಾರ ಅಭಿಮಾನಿಗಳ ಗಮನ ಸೆಳೆದಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನಲ್ಲಿ ವಿಶ್ವಪ್ರಸಾದ್ ನಿರ್ಮಿಸಿರುವ ಈ ಚಿತ್ರವನ್ನು ಖ್ಯಾತ ನೃತ್ಯ ನಿರ್ದೇಶಕ ಧನಂಜಯ್ ಮೊದಲ ಬಾರಿಗೆ ನಿರ್ದೇಶಿಸುತ್ತಿದ್ದಾರೆ. ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಖಾಸಗಿ ಶಾಲೆಯೊಂದರಲ್ಲಿ ಸಾವಿರಾರು ಮಕ್ಕಳೊಂದಿಗೆ ಆಚರಿಸಿಕೊಂಡ ವೇಳೆ ಚಿತ್ರದ ಟೀಸರ್ ಅನಾವರಣಗೊಂಡಿತು.
ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗಣೇಶ್ ಅವರ ವಿಭಿನ್ನ ಲುಕ್ ಮತ್ತು ಚಿತ್ರದ ಮೇಕಿಂಗ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಟೀಸರ್‌ನಲ್ಲಿ ಚಿತ್ರದ ಕಥೆಯ ಕೇವಲ 30 ಶೇಕಡಾ ಭಾಗವಷ್ಟೇ ತೋರಿಸಲಾಗಿದೆ ಎಂದು ನಿರ್ದೇಶಕ ಧನಂಜಯ್ ತಿಳಿಸಿದ್ದಾರೆ. ಚಿತ್ರದಲ್ಲಿ ಅಧ್ಯಾತ್ಮಿಕತೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಟ್ರೇಲರ್‌ನಲ್ಲಿ ಇನ್ನಷ್ಟು ಅಂಶಗಳನ್ನು ಪರಿಚಯಿಸುವುದಾಗಿ ಹೇಳಿದರು.
ನಟ ಗಣೇಶ್ ಮಾತನಾಡಿ, ‘ಮುಂಗಾರು ಮಳೆ’ ಚಿತ್ರದ ಮೂಲಕ ಆರಂಭವಾದ ತಮ್ಮ ಸಿನಿ ಪಯಣಕ್ಕೆ ಅಭಿಮಾನಿಗಳ ಪ್ರೀತಿ ಕಾರಣ ಎಂದರು. ನಾನು ಶಿವ ಭಕ್ತ. ಶಿವನ ಹಿನ್ನೆಲೆಯಿರುವ ‘ಪಿನಾಕ’ ಚಿತ್ರದ ಕಥೆ ಕೇಳಿದ ತಕ್ಷಣವೇ ತುಂಬಾ ಇಷ್ಟವಾಯಿತು. ಈ ಚಿತ್ರದ ಕ್ಲೈಮ್ಯಾಕ್ಸ್ ವಿಶೇಷವಾಗಿದ್ದು, ಕೇವಲ 12 ನಿಮಿಷಗಳ ದೃಶ್ಯಕ್ಕಾಗಿ 22 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ‘ಪಿನಾಕ’ ಚಾರುಕೇಶ ರಾಜನ ಕಥೆಯಾಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ಹೇಳಿದರು.
ನಿರ್ಮಾಣದ ಮೇಲ್ವಿಚಾರಣೆ ವಹಿಸಿರುವ ವಿಜಯ ರಾಜೇಶ್, ಗಣೇಶ್ ಜೊತೆ ಸಿನಿಮಾ ಮಾಡಬೇಕೆಂಬ ಆಸೆ ಈ ಚಿತ್ರದ ಮೂಲಕ ನೆರವೇರಿದೆ ಎಂದರು. ಕಾರ್ತಿಕೇಯ 2 ಚಿತ್ರದ ಮಾದರಿಯಲ್ಲೇ ಪೌರಾಣಿಕ ಹಿನ್ನೆಲೆ ಹೊಂದಿರುವ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇಡೀ ತಂಡದ ಶ್ರಮದಿಂದ ‘ಪಿನಾಕ’ ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಿದರು.ಇದನ್ನೂ ಓದಿ: ಹನಿಮೂನ್ ಹತ್ಯೆ ಕೇಸಲ್ಲಿ ಸೋನಮ್ ಎಡವಿದ್ದೆಲ್ಲಿ? – ಇಂಚಿಂಚು ಮಾಹಿತಿ ಕಲೆ ಹಾಕಿದ್ದ ಸಿಯಾ!
ಸಹ ನಿರ್ಮಾಪಕಿ ಕೃತಿ ಪ್ರಸಾದ್, ಉತ್ತಮ ಸಿನಿಮಾ ರೂಪುಗೊಳ್ಳಲು ಶ್ರಮಿಸಿದ ಚಿತ್ರತಂಡಕ್ಕೆ ಧನ್ಯವಾದ ಸಲ್ಲಿಸಿದರು. ಹಿರಿಯ ಕಲಾವಿದರಾದ ರಂಗಾಯಣ ರಘು, ಸಾಧು ಕೋಕಿಲ, ನಾಯಕಿ ಅರ್ಚನಾ ಅಯ್ಯರ್, ನಟರಾದ ರೋಬೋ ಗಣೇಶ್ ಹಾಗೂ ರವೀಂದ್ರನಾಥ್ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಸಂಗೀತ ನಿರ್ದೇಶಕ ಗೌರಾ ಹರಿ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಹುನಿರೀಕ್ಷಿತ ‘ಪಿನಾಕ’ ಚಿತ್ರ ಅಕ್ಟೋಬರ್ 2ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿ – ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಗಂಡನ ಕೊಂದ ನರ್ಸ್
