ಮಡಿಕೇರಿ: ಕಾಡಿನ ರಸ್ತೆಗಳಲ್ಲಿ (Forest Road) ಸಂಚರಿಸುವಾಗ ಬಲು ಎಚ್ಚರಿಕೆ ಅಗತ್ಯ. ಯಾಕೆಂದರೆ, ನಮ್ಮಿಂದ ಕಾಡಿನಲ್ಲಿರುವ ಜೀವಿಗಳಿಗೆ ತೊಂದರೆ ಆಗಬಾರದು. ಒಂದೊಂದು ಸಲ ಕಾಡಿನ ರಸ್ತೆಯಲ್ಲಿ ಸಾಗುವಾಗ ಅಪರೂಪದ ಘಟನೆಗಳು ಕಾಣಸಿಗುತ್ತವೆ. ಸದ್ಯ ಅಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡು ರಸ್ತೆಯಲ್ಲೇ ದೈತ್ಯ ಹೆಬ್ಬಾವು (Python) ಕಾಣಿಸಿಕೊಂಡಿದೆ. ಸಜ್ಜಳ್ಳಿ – ಯಡವನಾಡು ಸಂಪರ್ಕ ರಸ್ತೆಯ ಚೈನ್‌ಗೇಟ್ ಸಮೀಪ ರಾತ್ರಿ ವೇಳೆ ಹೆಬ್ಬಾವು ರಸ್ತೆ ದಾಟುತ್ತಿದ್ದ ದೃಶ್ಯ ಕಂಡು ವಾಹನ ಸವಾರರು ಆತಂಕಗೊಂಡಿದ್ದಾರೆ. ಇದನ್ನೂ ಓದಿ: ನಿಜವಾಯ್ತು ಭವಿಷ್ಯ – ಯುಗಾದಿ ಪಾಡ್ಯಮಿಯಂದೇ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ನುಡಿದಿದ್ದ ಬೊಂಬೆ

ಯಡವಾರೆ ಗ್ರಾಮದ ನಿವಾಸಿ ಕಾಫಿ ಬೆಳಗಾರ ಪ್ರಕಾಶ್ ಬೆಳ್ಳಿಯಪ್ಪ ಅವರು, ಕುಟುಂಬ ಸಮೇತ ಜೀಪಿನಲ್ಲಿ ರಾತ್ರಿ ಸುಮಾರು 9 ಗಂಟೆ ವೇಳೆಗೆ ಕುಶಾಲನಗರದಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಹೆಬ್ಬಾವು ಹರಿಯುತ್ತಿದ್ದ ದೃಶ್ಯ ಕಂಡುಬಂದಿದೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ – ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಐವರು ದುರ್ಮರಣ
ಸುಮಾರು 12 ರಿಂದ 13 ಅಡಿ ಉದ್ದದ ಹೆಬ್ಬಾವು ನಿಧಾನವಾಗಿ ರಸ್ತೆ ದಾಟಿ ಅರಣ್ಯದೊಳಗೆ ಸಾಗಿದೆ. ಪ್ರಕಾಶ್ ಅವರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ಸುತ್ತಮುತ್ತಲಿನ ಕಾಫಿ ತೋಟದ ಕಾರ್ಮಿಕರು ಮಾಲೀಕರು ಎಚ್ಚರಿಕೆ ಇರುವಂತೆ ಮನವಿ ಮಾಡಿದ್ದಾರೆ.
