ಬೆಂಗಳೂರು: ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆಶ್ರಮದ ಬಳಿ ಜಿಲೆಟಿನ್ ಕಡ್ಡಿಗಳು(Gelatin Sticks) ಪತ್ತೆಯಾದ ಪ್ರಕರಣ ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದು, ತನಿಖಾ ತಂಡಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಈ ಸ್ಫೋಟಕ ಪ್ರಕರಣದ ಬೆನ್ನತ್ತಿರುವ ಅಧಿಕಾರಿಗಳು ಯಾವುದೇ ಸಣ್ಣ ಸುಳಿವನ್ನೂ ಬಿಡದೆ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸ್ವತಃ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ (Seemanth Kumar Singh) ಅವರು ತನಿಖೆಯಲ್ಲಿ ಭಾಗಿಯಾಗಿದ್ದಾರೆ. ನಿನ್ನೆ ಸಂಜೆ ಆಡುಗೋಡಿಯ ಟೆಕ್ನಿಕಲ್ ಸೆಲ್‌ನಲ್ಲಿ ಸುಮಾರು 2 ಗಂಟೆಗಳ ಕಾಲ ಶಂಕಿತ ವ್ಯಕ್ತಿ ಲೋಹಿತ್ ನನ್ನು ಆಯುಕ್ತರು ಖುದ್ದು ವಿಚಾರಣೆ ನಡೆಸಿದ್ದಾರೆ.

ಸದ್ಯ ಕೋರಮಂಗಲ ಪೊಲೀಸರ ಕಸ್ಟಡಿಯಲ್ಲಿರುವ ಲೋಹಿತ್ ನನ್ನು ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಕಳೆದ ಎರಡು ದಿನಗಳಿಂದ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಿನ್ನೆಯೂ ಸಹ ಸತತ ಮೂರು ಗಂಟೆಗಳ ಕಾಲ ಎನ್‌ಐಎ ತಂಡ ಮಾಹಿತಿ ಕಲೆಹಾಕಿದೆ. ಲೋಹಿತ್ ಮಾನಸಿಕವಾಗಿ ಅಸ್ವಸ್ಥ ಎಂಬ ವಾದವಿದ್ದರೂ, ಇದರ ಹಿಂದೆ ಯಾವುದಾದರೂ ದೊಡ್ಡ ಸಂಚಿದೆಯೇ ಎಂಬ ನಿಟ್ಟಿನಲ್ಲಿ ಎನ್‌ಐಎ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಜಿಲೆಟಿನ್ ಕಡ್ಡಿ ಪತ್ತೆ ಕೇಸ್ – ಮೋದಿ ಬೆಂಗಳೂರಿಗೆ ಬರುವ ಹಿಂದಿನ ದಿನ ತಮಿಳುನಾಡಿಗೆ ಹೋಗಿದ್ದ ಲೋಹಿತ್
ಆರ್ಟ್ ಆಫ್ ಲಿವಿಂಗ್ ಆಶ್ರಮದ ಸುತ್ತಮುತ್ತಲಿನ ಜಮೀನು ಮಾಲೀಕರನ್ನೂ ರಾಮನಗರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆಶ್ರಮದವರು ಕೆಲವು ಜಮೀನುಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಆ ಕೋಪದಲ್ಲಿ ಯಾರಾದರೂ ಈ ಕೃತ್ಯ ಎಸಗಿರಬಹುದೇ? ಎಂಬ ಸಂಶಯದ ಮೇಲೆಯೂ ತನಿಖೆ ನಡೆಯುತ್ತಿದೆ.
ಇಷ್ಟೆಲ್ಲಾ ತೀವ್ರ ತನಿಖೆಗಳು ನಡೆಯುತ್ತಿದ್ದರೂ, ಜಿಲೆಟಿನ್ ಕಡ್ಡಿಗಳನ್ನು ಇಟ್ಟವರ ಬಗ್ಗೆ ನಿಖರವಾದ ಸುಳಿವು ಸಿಗದಿರುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

