ಚಿಕ್ಕಮಗಳೂರು: ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನ್ ಸಂಬಂಧ? ಎಂಬ ಹೇಳಿಕೆ ನೀಡಿದ್ದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರವಾಗಿ ಸಿ.ಟಿ ರವಿ (C.T Ravi) ಅವರಿಗೆ ಪೊಲೀಸ್ ಸಿಬ್ಬಂದಿ ನೋಟಿಸ್ ನೀಡಲು ತೆರಳಿದ್ದಾಗ ಭಾರೀ ಹೈಡ್ರಾಮಾ ನಡೆದಿದೆ.
ಈ ಬಗ್ಗೆ ಮಾತನಾಡಿದ ಸಿ.ಟಿ ರವಿಯವರು, ವಿದ್ಯಾರ್ಥಿಗಳ ಹೋರಾಟದ ಹೆಸರಿನಲ್ಲಿ ಜೀಪಿನ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ಹಚ್ಚಲು ಹೋದ ಮುಲ್ಲಾನನ ಬಗ್ಗೆ ನಾನು ಮಾತನಾಡಿದ್ದೇನೆ ಹೊರತು ಮುಸಲ್ಮಾನರ ಬಗ್ಗೆ ಮಾತನಾಡಿಲ್ಲ. ಅವನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ? ಎಂದು ವಿಡಿಯೋ ತೋರಿಸಿ ಅವರು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ʻನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನ್ ಸಂಬಂಧ?ʼ ಎಂದಿದ್ದ ಸಿ.ಟಿ.ರವಿ ವಿರುದ್ಧ FIR
ಪಹಲ್ಗಾಮ್‌ನಲ್ಲಿ ಕಲ್ಮ ಹೇಳದಿದ್ದಕ್ಕೆ ಸಾಯಿಸಿದ್ರು, ಅದಕ್ಕೆ ಏನು ಹೇಳ್ತೀರಾ? ನನ್ನ ಮೇಲೆ ಕೇಸ್ ಕೊಟ್ಟಿರೋನಿಗೂ ಈತನಿಗೂ ಏನು ಸಂಬಂಧ, ಪೊಲೀಸರು ತನಿಖೆ ಮಾಡಲಿ. ಮುಸಲ್ಮಾನರಲ್ಲೂ ಒಳ್ಳೆಯವರಿದ್ದಾರೆ, ಜಿಹಾದಿಗಳು ಒಳ್ಳೆಯವರು ಅಂತ ನಾನು ಸರ್ಟಿಫಿಕೇಟ್ ಕೊಡಲ್ಲ. ಬೇರೆಯವರು ದೂರು ಕೊಟ್ಟರೆ ಪೊಲೀಸರಿಗೆ ಎನ್.ಸಿ.ಕೊಡೋದು ಕಷ್ಟ. ವಿಪಕ್ಷ ನಾಯಕರು ದೂರು ಕೊಟ್ಟರೆ ಕೇಸ್ ದಾಖಲಿಸಲ್ಲ ನೀವು, ಇಡೀ ರಾತ್ರಿ ಡ್ರಾಮಾ ಮಾಡ್ತೀರಾ ಎಂದು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ನನ್ನ ಮೇಲೆ ಪ್ರಕರಣ ಹಾಕಲು ಆತುರ, ಬಂಧನಕ್ಕೆ ಒತ್ತಡ ಬೇರೆ ಅಂತೆ. ಸರ್ಕಾರದ ತಪ್ಪನ್ನ ಎತ್ತಿ ತೋರಿಸುತ್ತಿದ್ದೇನೆ ಎಂದು ಹೀಗೆ ಮಾಡುತ್ತಿದ್ದಾರೆ. ಹೆದರಿ ಓಡುವ ಜಯಮಾನದವನು ನಾನಲ್ಲ. ನಾಳೆಯೂ ಮಾತನಾಡ್ತೀನಿ, ನಾನು ಬಂಧನಕ್ಕೆ ತಯಾರಿದ್ದೇನೆ. ಭಯೋತ್ಪಾದಕರು, ತುಕ್ಡೆ ಗ್ಯಾಂಗ್ ಬಗ್ಗೆ ಮಾತನಾಡಿದ್ದೇನೆ. ಅದು ನನ್ನ ಕರ್ತವ್ಯ, ಹೆದರಿಸಿ, ಸುಳ್ಳು ಕೇಸ್ ಹಾಕಿ, ಸತ್ಯದ ಬಾಯಿ ಮುಚ್ಚಿಸಬಹುದು ಎಂದರೆ ಅದು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಎಫ್‌ಐಆರ್‌ನಲ್ಲಿ ಯಾರ ಬಗ್ಗೆ ದ್ವೇಷ ಅಂತ ಇದೆ? ಯಾರೇ ದೂರು ಕೊಟ್ರು ತಕ್ಷಣ ಅರೆಸ್ಟ್ ಮಾಡ್ತೀರಾ? ಮುಸ್ಲಿಂ ಸಮುದಾಯದ ಅವಹೇಳನ ಎಲ್ಲಿದೆ ಎಂದು ಪೊಲೀಸರಿಗೆ ಅವರು ಪ್ರಶ್ನಿಸಿದ್ದಾರೆ. ನೀವು ರಾಜಕಾರಣಿಗಳ ಕೈಗೊಂಬೆಯಾಗಿ ವರ್ತನೆ ಮಾಡಬೇಡಿ ಎಂದು ಪೊಲೀಸರ ವಿರುದ್ಧ ಗರಂ ಆಗಿದ್ದಾರೆ.
ಇದೇ ವೇಳೆ ಪೊಲೀಸರ ವಿರುದ್ಧ ಬಿಜೆಪಿ ಕಾರ್ಯಕರ್ತರು ಸಹ ಕಿಡಿಕಾರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ಕೊಟ್ಟಿದ್ದೇವೆ, ಕೇಸ್ ಮಾಡಿದ್ರಾ? ಕಾಫಿ-ಟೀ ಕುಡಿಯದ ಸಿ.ಟಿ.ರವಿಗೆ ಓಟಿ ರವಿ ಅಂತ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ನಾವು ದೂರು ಕೊಟ್ಟಿದ್ದೇವೆ, ಕೇಸ್ ಮಾಡಿದ್ದೀರಾ? ನಾಳೆ ಕಾಲ ಬದಲಾಗುತ್ತೆ, ನಿಮ್ಮ ರಕ್ಷಣೆಗೆ ಕಳಿಸಿದವನು ಬರಲ್ಲ ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪೊಲೀಸರು ಕೊಡಲು ಬಂದ ನೋಟಿಸ್‌ನ್ನು ಸಿ.ಟಿ ರವಿಯವರು ಪಡೆದಿಲ್ಲ. ಅಲ್ಲದೇ ಅಂಟಿಸಿದ ನೋಟಿಸ್‌ನ್ನು ಕಾರ್ಯಕರ್ತರು ಕಿತ್ತು ಹಾಕಿದ್ದಾರೆ. ಬಳಿಕ ನಗರ ಠಾಣಾ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಅಲ್ಲಿಂದ ವಾಪಸ್ ತೆರಳಿದ್ದಾರೆ. ಇದನ್ನೂ ಓದಿ: `ನೀಟ್’ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಪೋಸ್ಟರ್ ಪ್ರದರ್ಶನ – ಯುವತಿ ವಿರುದ್ಧ FIR
