ಚಿಕ್ಕಮಗಳೂರು: ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನ್ ಸಂಬಂಧ? ಎಂಬ ಹೇಳಿಕೆ ನೀಡಿದ್ದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿರುದ್ಧ ಬಿಜೆಪಿ ವತಿಯಿಂದ ಚಿಕ್ಕಮಗಳೂರಿನಲ್ಲಿ ನಡೆದ ಯೂತ್ ಫಾರ್ ನೇಷನ್ ಕಾರ್ಯಕ್ರಮದಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಸಿ.ಟಿ.ರವಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸಂಸತ್ ಭವನದ ಬಳಿ ನಡೆದ ಪ್ರತಿಭಟನೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವನ್ನ ಉದ್ದೇಶಿಸಿ ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಅವರ ಎದೆ ಸೀಳಿದರೆ ಮೂರು ಅಕ್ಷರವೂ ಇಲ್ಲ. ಅಂತಹವರು ನೀಟ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಬೇಕಂತೆ, ಮೋದಿ ಹಠವೋ ಅಂತೆ. ಅವರಿಗೂ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದಕ್ಕೂ ಏನ್ ಸಂಬಂಧ? ಅಂತಹ ವಿರೋಧಿಗಳು, ತುಕ್ಡೆ ಗ್ಯಾಂಗ್ ಗಳು ಅಲ್ಲಿ ಬಂದು ಮಾತಾಡ್ತಾರೆ. ತುಕ್ಡೆ ಗ್ಯಾಂಗ್ ಅಂದ್ರೆ ಯಾರು ಅಂತಾ ಗೊತ್ತಲ್ಲಾ. ಭಾರತ್ ತೇರೇ ತುಕ್ಡೆ ಹೋಂಗೆ, ಇನ್ ಶಾ ಅಲ್ಲಾ ಘೋಷಣೆ ಕೂಗಿದಂತೆ ತುಕ್ಕೆ ಗ್ಯಾಂಗ್ ಗಳು ಹೋರಾಟದಲ್ಲಿ ಭಾಗವಹಿಸುತ್ತಾರೆ ಎಂದು ಭಾಷಣ ಮಾಡಿದ್ದರು.
ಸಿ.ಟಿ ರವಿ ಅವರ ಈ ಹೇಳಿಕೆಯಿಂದ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಮುಸ್ಲಿಂ ಸಮುದಾಯ ಸಿ.ಟಿ.ರವಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಸಮುದಾಯವನ್ನ ನಿಂದಿಸಿ ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿ ಎಬ್ಬಿಸಲು ಯತ್ನಿಸಲಾಗಿದೆ ಎಂದು ಜಾಮೀಯ ಮಸೀದಿ ಅಧ್ಯಕ್ಷ ಮುದಾಸೀರ್ ಪಾಷಾ ಸಿ.ಟಿ. ರವಿ ವಿರುದ್ಧ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದ್ವೇಷಪೂರಿತ ಭಾಷಣ ಮಾಡಿದ ಸಿ.ಟಿ. ರವಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
