– ಅಧಿಕಾರ ದುರುಪಯೋಗ ಮಾಡಿಕೊಂಡು ತೊಂದರೆ ಕೊಡುವ ಉದ್ದೇಶ ನನಗಿಲ್ಲ: ಡಿಕೆಶಿ
ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್ ಪಾಟೀಲ್ (GS Patil) ಸರ್ವಾನುಮತನದಿಂದ ಆಯ್ಕೆಯಾದರು.
ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಹಾಗೂ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಜಿ.ಎಸ್ ಪಾಟೀಲ್ ಅವರನ್ನ ಕರೆತಂದು ಸ್ಪೀಕರ್ ಪೀಠದಲ್ಲಿ ಕೂರಿಸಿದರು. ಸ್ಪೀಕರ್ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಕಲಾಪದೊಳಗೆ ವಿಪಕ್ಷ ಬಿಜೆಪಿ ಸದಸ್ಯರು ಪ್ರವೇಶಿಸಿದ್ರು.

ಆಯ್ಕೆ ನಡೆದಿದ್ದು ಹೇಗೆ?
ಸ್ಪೀಕರ್ ಆಯ್ಕೆ ಬಗ್ಗೆ ಸದನದಲ್ಲಿ ಹಂಗಾಮಿ ಸ್ಪೀಕರ್ ಜಯಚಂದ್ರ (TB Jayachandra) ರೂಲಿಂಗ್ ಕೊಟ್ಟರು. ನಂತರ ಸಿಎಂ ಡಿಕೆ ಶಿವಕುಮಾರ್ ಸ್ಪೀಕರ್ ಸ್ಥಾನಕ್ಕೆ ಜಿ.ಎಸ್ ಪಾಟೀಲ್ ಅವರ ಹೆಸರನ್ನು ಸೂಚಿಸಿದರು. ಜಿ.ಎಸ್ ಪಾಟೀಲ್ ಹೆಸರಿಗೆ ಡಿಸಿಎಂ ಪರಮೇಶ್ವರ್ ಅನುಮೋದನೆ ನೀಡಿದರು. ಬಳಿಕ ಹಂಗಾಮಿ ಸ್ಪೀಕರ್ ಪ್ರಸ್ತಾವನೆ ಮತಕ್ಕೆ ಹಾಕಿದರು. ಪ್ರಸ್ತಾವನೆ ಅಂಗೀಕಾರದ ಬಳಿಕ ನೂತನ ಸ್ಪೀಕರ್ ಆಗಿ ಜಿ.ಎಸ್ ಪಾಟೀಲ್ ಅವಿರೋಧವಾಗಿ ಆಯ್ಕೆಯಾದರು.
2028ಕ್ಕೆ ಜನ ತೀರ್ಮಾನ ಮಾಡ್ತಾರೆ
ಇದಕ್ಕೂ ಮುನ್ನ ಕಲಾಪ ಉದ್ದೇಶಿಸಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನನ್ನ ಯೋಜನೆ, ಚಿಂತನೆಗಳ ಬಗ್ಗೆ ಮುಂದೆ ಮಾತಾಡ್ತೇನೆ, ನನಗೆ ಅಧಿಕಾರ ದುರುಪಯೋಗ ಮಾಡಿಕೊಂಡು ತೊಂದರೆ ಕೊಡುವ ಉದ್ದೇಶ ಇಲ್ಲ. ಯಾರಿಗೆ ಎಷ್ಟು ಗೌರವ ಕೊಡಬೇಕೋ ಕೊಡ್ತೇನೆ. ಇಲ್ಲಿ ಸಿದ್ದರಾಮಯ್ಯ ಕೂತಿದ್ರು, ನಾನು ಪಕ್ಕದಲ್ಲಿ ಕೂತಿದ್ದೆ. ಇದೇ ಸ್ಥಾನದಲ್ಲಿ ನಿಂತುಕೊಂಡು ʻಒನ್ ಮ್ಯಾನ್ ವಿತ್ ಕರೇಜ್ ಮೇಕ್ಸ್ ಮೇಜಾರಿಟಿʼ ಎಂದು ಹೇಳಿದ್ದೆ. ಸಿದ್ದರಾಮಯ್ಯ ಸೇರಿ, ನನ್ನ ನಂಬರ್ 136 ಅಂತ ಹೇಳಿದ್ದೆ, ನಾವೆಲ್ಲಾ ಒಂದೇ ಯುನೈಟ್ ಆಗಿ ಇರ್ತೀವಿ. 2028ರ ಚುನಾವಣೆಯಲ್ಲಿ ಏನಾಗಬೇಕು ಅಂತ ಜನ ತೀರ್ಮಾನ ಮಾಡ್ತಾರೆ ಎಂದರು.

ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ
ನನಗೆ ರಾಜಕಾರಣ ಗೊತ್ತಿದೆ, ನಾನು ಫುಟ್ ಬಾಲ್ ಆಡೋನಲ್ಲ, ಚೆಸ್ ಆಡೋನೂ ಅಲ್ಲ. ವಿಪಕ್ಷಗಳು ನಾವು ಸೇರಿ ಕೆಲಸ ಮಾಡಬೇಕು. ಯಾವುದು ರಾಜಕೀಯದಲ್ಲಿ ಶಾಶ್ವತ ಅಲ್ಲ, ಇಲ್ಲಿದ್ದವರು ಅಲ್ಲಿರಬಹುದು, ಅಲ್ಲಿದ್ದವರು ಇಲ್ಲಿಗೆ ಬರಬಹುದು. ನಾವೆಲ್ಲಾ ಆಯ್ಕೆಯಾಗೋದು ರಾಜ್ಯದ ಹಿತಕ್ಕೋಸ್ಕರ ನೀವು ಹಿರಿಯರು, ದೇವರು ನಿಮಗೆ (ಜಯಚಂದ್ರ ತೋರಿಸಿ) ಈ ಸ್ಥಾನದಲ್ಲಿ ಕೂರಿಸಿದ್ದಾನೆ. ನೀವು ಹಾಗಂತ ಆ ಸ್ಥಾನದಲ್ಲಿ ಕೂತಿದ್ದೇನೆ ಅಂತ ಬೇಜಾರಾಗಬೇಡಿ. ಆ ಸ್ಥಾನದಲ್ಲಿ ಕೂತಿರುವವರು ಸಿಎಂ ಆಗಿದ್ದಾರೆ. ಎಸ್.ಎಂ ಕೃಷ್ಣ ಕೂತಿದ್ರು ಸಿಎಂ ಆಗಿದ್ದಾರೆ, ಜಗದೀಶ್ ಶೆಟ್ಟರ್ ಕೂತಿದ್ರು ಸಿಎಂ ಆಗಿದ್ರು. ಖಾದರ್ ಅಲ್ಲಿ ಕೂತಿದ್ರು, ಈಗ ಡಬಲ್ ಧಮಾಕ ತಗೊಂಡವ್ರೆ. ನೀವು ವಿಶ್ವಾಸ ಇಡಿ, ವಿಶ್ವಾಸದ ಮೇಲೆ ಬದುಕಬೇಕು ಎಂದು ಕಿವಿಮಾತು ಹೇಳಿದ್ರು.

