ದಾವಣೆಗೆರೆ: ಉತ್ತರಾಖಂಡದಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ (Uttarakhand Helicopter Crash) ಸಾವನ್ನಪ್ಪಿದ ಹೈಕೋರ್ಟ್ ನ್ಯಾಯವಾದಿ ಸುಧೀರ್ ಕಾಕನೂರ ಅವರ ಅಂತ್ಯಕ್ರಿಯೆ ಚನ್ನಗಿರಿಯ ತ್ಯಾವಣಗಿ ಗ್ರಾಮದ ಜಮೀನಿನಲ್ಲಿ ನೆರವೇರಿದೆ. ಈ ವೇಳೆ ಅವರ ತಂದೆ ಮಲ್ಲೇಶಪ್ಪ ಕಣ್ಣೀರಿಟ್ಟದ್ದಾರೆ. ಇಂತಹ ವಯಸ್ಸಲ್ಲಿ ಮಗನ ಅಂತ್ಯಕ್ರಿಯೆ ಮಾಡಬೇಕಾಗಿ ಬಂತು. ನನ್ನ ಮಗ ಜಡ್ಜ್ ಆಗಲು ಬಯಸಿದ್ದ ಎಂದು ಭಾವುಕರಾಗಿದ್ದಾರೆ.
ನನ್ನ ಮಗ ಇಷ್ಟೊಂದು ಸಹಾಯ ಮಾಡಿದ್ದ ಎಂದು ನಮಗೆ ಗೊತ್ತೇ ಇಲ್ಲ. ಊರಿನವರು, ಯಾರೇ ಬರಲಿ ಸಹಾಯ ಮಾಡುತ್ತಿದ್ದ. ಅವನಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಎಂಬಿಬಿಎಸ್ ಓದುತ್ತಿದ್ದಾಳೆ. ನನ್ನ ಮೊಮ್ಮಕ್ಕಳು ನನ್ನ ಎರಡು ಕಣ್ಣುಗಳಿದ್ದ ಹಾಗೇ, ಅವರನ್ನು ನಾನು ಒಳ್ಳೆಯ ರೀತಿ ನೋಡಿಕೊಳ್ತೀನಿ ಎಂದಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಹೆಲಿಕಾಪ್ಟರ್ ದುರಂತ – ಸರ್ಕಾರಿ ಗೌರವದೊಂದಿಗೆ ನೆರವೇರಿದ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ ಅಂತ್ಯಕ್ರಿಯೆ
ಹೆಲಿಕಾಪ್ಟರ್ ದುರಂತಕ್ಕೆ ಸರಿಯಾಗಿ ನಿರ್ವಹಣೆ ಮಾಡದೇ ಇರುವುದೇ ಕಾರಣ ಎನ್ನುತ್ತಿದ್ದಾರೆ. ಸೂಕ್ತವಾಗಿ ನಿರ್ವಹಣೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಅವರು ಆಗ್ರಹಿಸಿದ್ದಾರೆ.
ಸುಧೀರ್ ಅವರ ಸಂಬಂಧಿ ಜ್ಞಾನೇಶ್ ಮಾತನಾಡಿ, ಸಾವಿರಾರು ಅಡಿ ಎತ್ತರದಿಂದ ಹೆಲಿಕಾಪ್ಟರ್ ಬಿದ್ದು ಪತನವಾಗಿದೆ. ಮೃತದೇಹಗಳು ಗುರುತಿಸಲಾರದಷ್ಟು ಛಿದ್ರವಾಗಿದ್ದವು. ಮೃತದೇಹಗಳ ಗುರುತು ಪತ್ತೆ ಹಚ್ಚವುದು ಬಹಳ ಕಷ್ಟವಾಗಿತ್ತು. ಕೊರಳಲ್ಲಿ ಚೈನ್, ಕೈಯಲ್ಲಿ ಉಂಗುರ ಹಾಗೂ ಪರ್ಸ್ ಪತ್ತೆಯಾಗಿತ್ತು. ಇನ್ನಷ್ಟು ಗುರುತುಗಳ ಅಗತ್ಯವಿತ್ತು.
ಮೃತ ಸುಧೀರ ಸಹೋದರ ದಂತ ವೈದ್ಯರಾಗಿದ್ದು, ಅವರು ಕೆಲ ತಿಂಗಳ ಹಿಂದೆ ಸುಧೀರ್ ಹಲ್ಲಿಗೆ ಕ್ಯಾಪ್ ಹಾಕಿದ್ದರು. ಈ ವಿಚಾರ ಅಧಿಕಾರಿಗಳಿಗೆ ಹೇಳಿದಾಗ ಶವ ಗುರುತು ಪತ್ತೆಮಾಡಿ ಸಂಬಂಧಿಕರಿಗೆ ಶವ ನೀಡಲು ಅಧಿಕಾರಿಗಳು ಒಪ್ಪಿಕೊಂಡರು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಹೆಲಿಕಾಪ್ಟರ್ ದುರಂತ – ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದ ತುಮಕೂರಿನ ಇಬ್ಬರ ಅಂತ್ಯಸಂಸ್ಕಾರ
