– ಕೇಂದ್ರ ನಗರಪಾಲಿಕೆಯಿಂದ 150 ಅನಧಿಕೃತ ಅಂಗಡಿಗಳ ತೆರವು ಕಾರ್ಯ
ಬೆಂಗಳೂರು: ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್‌ನಲ್ಲಿ ಜೆಬಿಸಿಗಳು ಘರ್ಜನೆ ಮಾಡಿವೆ. ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ 150 ಅಂಗಡಿಗಳ ತೆರವು ಕಾರ್ಯಾಚರಣೆ ನಡೆದಿದೆ. ಅನಧಿಕೃತವಾಗಿ ಅಂಗಡಿ ನಿರ್ಮಾಣ ಮಾಡಿ ಬಾಡಿಗೆಗೆ ಬಿಡುವ ಮಾಫಿಯಾ ಕಡಿವಾಣಕ್ಕೆ ಕೇಂದ್ರ ನಗರ ಪಾಲಿಕೆ ಮುಂದಾಗಿದೆ.
ಬೆಂಗಳೂರಿನ ಕೇಂದ್ರ ನಗರ ಪಾಲಿಕೆಯ ಕೆ.ಆರ್ ಮಾರ್ಕೆಟ್‌ನಲ್ಲಿ ತೆರವು ಕಾರ್ಯಾಚರಣೆ ಭರ್ಜರಿಯಾಗಿ ನಡೆದಿದೆ. ಕೆ.ಆರ್ ಮಾರ್ಕೆಟ್ ಪ್ಲೈಓವರ್ ಕೆಳಗಡೆ ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ ಸುಮಾರು 150 ಅಂಗಡಿಗಳನ್ನ ತೆರವು ಮಾಡುವಂತಹ ಕಾರ್ಯ ಕೇಂದ್ರ ನಗರ ಪಾಲಿಕೆ ಮಾಡಿದೆ. ಹಲವು ವರ್ಷಗಳಿಂದ ಅನಧಿಕೃತವಾಗಿ ಅಂಗಡಿಗಳ ನಿರ್ಮಾಣ ಮಾಡಿ ವ್ಯಾಪಾರ ಮಾಡಲಾಗುತ್ತಿದೆ. ಕೋರ್ಟ್‌ನಿಂದ ಪರ್ಮಿಷನ್ ಪಡೆದು ತೆರವು ಮಾಡುವಂತಹ ಕೆಲಸ ನಡೆಯುತ್ತಿದೆ.
15 ದಿನಗಳ ಹಿಂದೆಯೇ ಅನಧಿಕೃತ ಅಂಗಡಿ ನಿರ್ಮಾಣ ಮಾಡಿದ್ದವರಿಗೆ ತೆರವು ಮಾಡುತ್ತೇವೆ ಎಂದು ಕೇಂದ್ರ ನಗರ ಪಾಲಿಕೆ ಮಾಹಿತಿ ನೀಡಿದೆ. ಆದರೆ, ಅಂಗಡಿಗಳನ್ನ ತೆರವು ಮಾಡಿರಲಿಲ್ಲ. ಇಂದು ತೆರವು ಮಾಡುವಂತಹ ಕೆಲಸ ಆಗುತ್ತಿದೆ. 2 ದಿನದಲ್ಲಿ ತೆರವು ಮುಗಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅನಧಿಕೃತ ಅಂಗಡಿಗಳನ್ನ ನಿರ್ಮಾಣ ಮಾಡಿ ಬಾಡಿಗೆಗೆ ಬಿಡುವ ಮಾಫಿಯಾ ಇದೆ. ಅಂತಹ ಮಾಫಿಯಾಗೆ ಕಡಿವಾಣ ಹಾಕುತ್ತೇವೆ. ಯಾವುದೇ ಕಾರಣಕ್ಕೂ ಅನಧಿಕೃತ ಅಂಗಡಿಗಳ ತೆರವು ಮಾಡುವ ಕೆಲಸ ನಿಲ್ಲಲ್ಲ. 150 ಅಂಗಡಿಗಳನ್ನು ತೆರವು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
