– ಜಿಬಿಎ ಅಧಿಕಾರಿಗಳ ಮೇಲಿನ ಹಲ್ಲೆ ಬಳಿಕ ಮತ್ತೆ ತೆರವು ಕಾರ್ಯ ಆರಂಭ
ಬೆಂಗಳೂರು: ರಾಜಧಾನಿಯ ಅತ್ಯಂತ ಗಿಜಿಗುಡುವ ಹಾಗೂ ಸೂಕ್ಷ್ಮ ಪ್ರದೇಶವಾದ ಶಿವಾಜಿನಗರದಲ್ಲಿ (Shivajingara) ಮತ್ತೆ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಇತ್ತೀಚೆಗಷ್ಟೇ ಶಿವಾಜಿನಗರದಲ್ಲಿ ಒತ್ತುವರಿ ತೆರವು ಕಾರ್ಯಕ್ಕೆ ಬಂದಿದ್ದ ಜಿಬಿಎ (GBA) ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ಪುಂಡರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ಈ ಘಟನೆ ಬಳಿಕ ಒಂದು ವಾರಗಳ ಕಾಲ ಈ ಪ್ರದೇಶದಲ್ಲಿ ತೆರವು ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇದೀಗ ಜಿಬಿಎ ಅಧಿಕಾರಿಗಳ ತಂಡ ಪೊಲೀಸರ ಸರ್ಪಗಾವಲಿನಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿದೆ.
ಶಿವಾಜಿನಗರದ ರಸೆಲ್ ಮಾರ್ಕೆಟ್ ರಸ್ತೆ , ಶಿವಾಜಿನಗರ ಚರ್ಚ್ ರಸ್ತೆ, ಬೌರಿಂಗ್ ಆಸ್ಪತ್ರೆ ರಸ್ತೆಗಳಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಪುಲಿಕೇಶಿನಗರದ ಎಸಿಪಿ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಶಿವಾಜಿನಗರ ಪೊಲೀಸರು ಭದ್ರತೆ ನೀಡಿದ್ದಾರೆ.

ಏನಾಗಿತ್ತು?
ಜು.21 ರ ಮಂಗಳವಾರದಂದು ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಜಿಬಿಎ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ಪುಂಡರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ಬಸ್ ಸ್ಟ್ಯಾಂಡ್ ಬಳಿ ಬೆಳಿಗ್ಗೆಯಿಂದ ತೆರವು ಕಾರ್ಯಾಚರಣೆ (Footpath Encroachment) ನಡೆಯುತ್ತಿದ್ದಾಗ, ಮಧ್ಯಾಹ್ನ 12:30ರ ಸುಮಾರಿಗೆ ಇನ್ನೋವಾ ಕಾರಿನಲ್ಲಿ ಬಂದ ಬಸವರಾಜ್ ಪಡುಕೋಟೆ ಹಾಗೂ ಆತನ ಗ್ಯಾಂಗ್ ಏಕಾಏಕಿ ಅಧಿಕಾರಿಗಳ ಮೇಲೆ ಮುಗಿಬಿದ್ದಿತ್ತು.
ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಮಾಧವ್ ರಾವ್ ಅವರ ಮೇಲೆ ಅಪರಿಚಿತರು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದು, ತಳ್ಳಿದ ರಭಸಕ್ಕೆ ಅಧಿಕಾರಿ ಕೆಳಗೆ ಬಿದ್ದಿದ್ದಾರೆ. ಅಲ್ಲದೇ ಹೆಲ್ಮೆಟ್ ಹಾಗೂ ಪ್ಲಾಸ್ಟಿಕ್ ಚೇರ್‌ಗಳಿಂದ ಮನಸೋಇಚ್ಛೆ ಹೊಡೆಯಲಾಗಿತ್ತು.

‘ನಮ್ಮ ಕರ್ನಾಟಕ ಸೇನೆ’ ಸಂಘಟನೆಯ ಬಸವರಾಜ್ ಪಡುಕೋಟೆ ಹಾಗೂ ಆತನ ಬೆಂಬಲಿಗರು ಮಹಿಳಾ ಅಧಿಕಾರಿಯೊಬ್ಬರ ಮುಖದ ಹತ್ತಿರವೇ ಬಂದು ಪೆಪ್ಪರ್ ಸ್ಪ್ರೇ ಮಾಡಿ ಭಯಾನಕ ವಾತಾವರಣ ಸೃಷ್ಟಿಸಿದ್ದರು. ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ನಾಲ್ಕು ಜನ ಪೊಲೀಸರಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ವೀಡಿಯೋ ಮಾಡುತ್ತಾ ನಿಂತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವಾಗ ಪೊಲೀಸರು ಅಲರ್ಟ್ ಆಗಿರಬೇಕಿತ್ತು ಎಂದು ಜಿಬಿಎ ಸಿಬ್ಬಂದಿ ಆಕ್ರೋಶ ಹೊರಹಾಕಿದ್ದರು.
ಈ ಸಂಬಂಧ ತನಿಖೆ ನಡೆಸಿದ್ದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು, ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ಸೇರಿ 12 ಮಂದಿಯನ್ನ ಬಂಧಿಸಿದ್ದರು. ಈ ಪೈಕಿ ಪ್ರಮುಖ ಐವರು ಆರೋಪಿಗಳನ್ನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ ಮತ್ತೆ ಫುಟ್‌ಪಾತ್ ತೆರವು ಕಾರ್ಯ ಶುರುವಾಗಿದೆ.
