ಟೆಲ್ ಅವೀವ್: ದುಬೈನಿಂದ ಟೆಲ್ ಅವೀವ್ಗೆ (Flydubai) ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ (Pilot Attack) ಪೈಲಟ್ ಮೇಲೆ ಸಹ-ಪೈಲಟ್ ನಡೆಸಿದ ದಾಳಿ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ದಾಳಿಕೋರ ಒಬ್ಬನೇ ಕಾರ್ಯಾಚರಿಸಿದ್ದನಾ ಅಥವಾ ಯಾವುದಾದರೂ ಸಂಘಟನೆಯ ನೆರವು ಪಡೆದಿದ್ದನಾ ಎಂಬುದರ ಕುರಿತು ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ.
ಇಸ್ರೇಲಿ ಮಾಧ್ಯಮಗಳ ವರದಿ ಪ್ರಕಾರ, ಆರೋಪಿತ ಸಹ-ಪೈಲಟ್ ಇತ್ತೀಚಿನ ವರ್ಷಗಳಲ್ಲಿ ಆತ್ಮಹತ್ಯಾ ದಾಳಿಗಳಿಗೆ ಪ್ರಚೋದನೆ ನೀಡುತ್ತಿದ್ದ ಎನ್ನಲಾದ ತೀವ್ರಗಾಮಿ ಧರ್ಮಪ್ರಚಾರಕನ ಪ್ರಭಾವಕ್ಕೆ ಒಳಗಾಗಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆತ ಏಕಾಂಗಿಯಾಗಿ ಕೃತ್ಯ ಎಸಗಿದ್ದಾನೆಯೇ ಅಥವಾ ಯಾವುದೇ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದಾನೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಆರೋಪಿತ ಸಹ-ಪೈಲಟ್ ಸುಮಾರು 9 ತಿಂಗಳ ಹಿಂದಷ್ಟೇ ಫ್ಲೈದುಬೈನಲ್ಲಿ ಕೆಲಸಕ್ಕೆ ಸೇರಿದ್ದ ಎನ್ನಲಾಗಿದ್ದು, ಆತ ಯಾವುದಾದರೂ ನಿರ್ದಿಷ್ಟ ಉದ್ದೇಶ ಅಥವಾ ಯೋಜನೆಯ ಭಾಗವಾಗಿ ವಿಮಾನಯಾನ ಸಂಸ್ಥೆಗೆ ಸೇರಿದ್ದನಾ ಎಂಬ ಕೋನವನ್ನೂ ತನಿಖೆ ಮಾಡಲಾಗುತ್ತಿದೆ.ಇದನ್ನೂ ಓದಿ: ಪ್ರಥಮ ದರ್ಜೆ ಕ್ರಿಕೆಟ್ಗೆ ಯಜುವೇಂದ್ರ ಚಹಲ್ ವಿದಾಯ
ವಿಮಾನವು ಜೋರ್ಡಾನ್ನ ಮರುಭೂಮಿ ಪ್ರದೇಶದತ್ತ ವೇಗವಾಗಿ ಕೆಳಗಿಳಿದಿದ್ದ ಹಿನ್ನೆಲೆಯಲ್ಲಿ, ವಿಮಾನವನ್ನು ಅಲ್ಲಿ ಪತನಗೊಳಿಸುವ ಅಥವಾ ಯಾವುದಾದರೂ ಪ್ರಮುಖ ಗುರಿಗೆ ಡಿಕ್ಕಿ ಹೊಡೆಸುವ ಉದ್ದೇಶವಿತ್ತೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ಭದ್ರತಾ ವ್ಯವಸ್ಥೆಯಲ್ಲೂ ಲೋಪ?
ಈ ಪ್ರಕರಣದಲ್ಲಿ ಇಸ್ರೇಲ್ನ ವಿಮಾನಯಾನ ಭದ್ರತಾ ನಿಯಮಗಳ ಜಾರಿಯ ಕುರಿತೂ ಪ್ರಶ್ನೆಗಳು ಎದ್ದಿವೆ. ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರದ ದೇಶಗಳ ಪೈಲಟ್ಗಳು ಟೆಲ್ ಅವೀವ್ಗೆ ಹಾರಾಟ ನಡೆಸುವುದಕ್ಕೆ ನಿರ್ಬಂಧವಿದೆ ಎನ್ನಲಾಗಿದ್ದು, ಈ ನಿಯಮದ ಜವಾಬ್ದಾರಿಯನ್ನು ವಿಮಾನಯಾನ ಸಂಸ್ಥೆಗಳ ಮೇಲೆಯೇ ಬಿಡಲಾಗಿತ್ತು ಎಂದು ವರದಿ ತಿಳಿಸಿದೆ.
ಒಮಾನ್ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧ ಇಲ್ಲದಿದ್ದರೂ, ಒಮಾನ್ನ ಪೈಲಟ್ಗಳು ಈ ಹಿಂದೆ ಟೆಲ್ ಅವೀವ್ಗೆ ಹಾರಾಟ ನಡೆಸಿರುವುದು ತನಿಖೆಯ ಗಮನ ಸೆಳೆದಿದೆ. ಇದರಿಂದ ಇಸ್ರೇಲ್ನ ಭದ್ರತಾ ಪ್ರೋಟೋಕಾಲ್ಗಳ ಅನುಷ್ಠಾನದಲ್ಲಿ ಲೋಪವಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಅಪ್ರಾಪ್ತರಿಂದ ವಾಹನ ಚಾಲನೆ; 131 ಕೇಸ್, 13 ಲಕ್ಷ ರೂಪಾಯಿಗೂ ಅಧಿಕ ದಂಡ
ಪ್ರಕರಣದ ಬಳಿಕ ಸರ್ಕಾರವು ವಿಮಾನಯಾನ ಭದ್ರತೆ ಹಾಗೂ ಸಂಬಂಧಿತ ಸುರಕ್ಷತಾ ಕ್ರಮಗಳನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ಸೂಚಿಸಿದೆ. ಈ ನಡುವೆ, ಯುಎಇ ಅಟಾರ್ನಿ ಜನರಲ್ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದು, ಘಟನೆಗೆ ಭಯೋತ್ಪಾದಕ ಉದ್ದೇಶ ಅಥವಾ ಪೂರ್ವಯೋಜನೆ ಇತ್ತೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.

