ನವದೆಹಲಿ: ಭಾರತ ತಂಡದ(Team India) ಹಿರಿಯ ಲೆಗ್-ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal) ಪ್ರಥಮ ದರ್ಜೆ ಕ್ರಿಕೆಟ್ಗೆ ಶುಕ್ರವಾರ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಅವರ 17 ವರ್ಷಗಳ ಸುದೀರ್ಘ ಕೆಂಪು ಚೆಂಡಿನ ಕ್ರಿಕೆಟ್ ಪ್ರಯಾಣಕ್ಕೆ ತೆರೆಬಿದ್ದಿದೆ.
ಭಾರತ ಪರ ಟೆಸ್ಟ್ ಕ್ರಿಕೆಟ್ ಆಡುವ ತಮ್ಮ ಬಹುದಿನಗಳ ಕನಸು ಈಡೇರದಿದ್ದರೂ, ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ (ಏಕದಿನ ಹಾಗೂ ಟಿ20) ಮುಂದುವರಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಭಾರತ ಪರ 72 ಏಕದಿನ ಹಾಗೂ 80 ಟಿ20 ಪಂದ್ಯಗಳನ್ನು ಆಡಿರುವ 35 ವರ್ಷದ ಚಹಲ್ ಅವರಿಗೆ ಟೆಸ್ಟ್ ಪಂದ್ಯದಲ್ಲಿ(Test Match) ಕಣಕ್ಕಿಳಿಯುವ ಅವಕಾಶ ಸಿಗಲೇ ಇಲ್ಲ. ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಗಸ್ಟ್ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ (ಟಿ20) ಆಡಿದ್ದರು.
View this post on Instagram
148 ವಿಕೆಟ್ ಸಾಧನೆ
2009ರಲ್ಲಿ ಹರ್ಯಾಣ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಚಹಲ್, ಒಟ್ಟು 49 ಪಂದ್ಯಗಳಿಂದ 32.27ರ ಸರಾಸರಿಯಲ್ಲಿ 148 ವಿಕೆಟ್ಗಳನ್ನು ಕಬಳಿಸಿದ್ದಾರೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ತಮ್ಮ ಅಂತಿಮ ಪ್ರಥಮ ದರ್ಜೆ ಪಂದ್ಯವನ್ನು ಆಡಿದ ಅವರು, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
“ನಾನು 10 ವರ್ಷದವನಿದ್ದಾಗ ಮೊದಲ ಬಾರಿಗೆ ಕೆಂಪು ಚೆಂಡನ್ನು ಕೈಗೆತ್ತಿಕೊಂಡೆ. ಆ ಕ್ಷಣದಲ್ಲೇ ಈ ಆಟವನ್ನು ನಾನು ಇಷ್ಟೊಂದು ಗಾಢವಾಗಿ ಪ್ರೀತಿಸುತ್ತೇನೆ ಎಂದು ಊಹಿಸಿರಲಿಲ್ಲ. ಕೆಂಪು ಚೆಂಡಿನ ಕ್ರಿಕೆಟ್ ನನಗೆ ಕೇವಲ ಒಂದು ಮಾದರಿಯಾಗಿರಲಿಲ್ಲ; ಅದು ನನಗೆ ತಾಳ್ಮೆ, ವ್ಯಕ್ತಿತ್ವ, ಸಹಿಷ್ಣುತೆ ಮತ್ತು ಗಂಟೆಗಟ್ಟಲೆ ಮೈದಾನದಲ್ಲಿ ನಿಂತು ಪ್ರತಿ ರನ್ ಹಾಗೂ ವಿಕೆಟ್ಗಾಗಿ ಹೋರಾಡುವ ಖುಷಿಯನ್ನು ಕಲಿಸಿಕೊಟ್ಟಿತು. ಭಾರತದ ಟೆಸ್ಟ್ ಕ್ಯಾಪ್ ಧರಿಸುವುದು ನನ್ನ ಬಹುದಿನಗಳ ಕನಸಾಗಿತ್ತು, ಅದು ನನಸಾಗದೇ ಇರಬಹುದು, ಆದರೆ ಈ ಮಾದರಿಯಲ್ಲಿ ಸಾಗಿದ ಹಾದಿ ಹಾಗೂ ಸಿಕ್ಕ ಅವಕಾಶಗಳ ಬಗ್ಗೆ ನನಗೆ ಅಪಾರ ತೃಪ್ತಿ ಮತ್ತು ಕೃತಜ್ಞತೆ ಇದೆ” ಎಂದು ಚಹಲ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆರಂಭದಲ್ಲಿ ಹಿನ್ನಡೆ, ಕೊನೆಗೆ ಸತತ 8 ಅಂಕ – ಕುಸ್ತಿಯಲ್ಲಿ ಸುಜೀತ್ ಕಲ್ಕಲ್ಗೆ ಚಿನ್ನ
ಆಟ ಇನ್ನೂ ಮುಗಿದಿಲ್ಲ
ಪ್ರಥಮ ದರ್ಜೆ ಕ್ರಿಕೆಟ್ಗೆ ವಿದಾಯ ಹೇಳಿದರೂ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹಿಂದೆ ಸರಿಯುವ ಯಾವುದೇ ಉದ್ದೇಶವಿಲ್ಲ ಎಂಬುದನ್ನು ಚಹಲ್ ದೃಢಪಡಿಸಿದ್ದಾರೆ.
“ನನ್ನ ಆಟ ಇನ್ನೂ ಮುಗಿದಿಲ್ಲ. ದೇಶಕ್ಕಾಗಿ ಆಡುವ ಹಸಿವು ನನ್ನಲ್ಲಿ ಇಂದಿಗೂ ಜೀವಂತವಾಗಿದೆ. ನನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿ ಇದೆ ಎಂದು ನಂಬಿದ್ದೇನೆ. ಏಕದಿನ ಮತ್ತು ಟಿ20 ಮಾದರಿಯಲ್ಲಿ ಮತ್ತೆ ಭಾರತ ತಂಡವನ್ನು ಪ್ರತಿನಿಧಿಸಲು ನನ್ನ ಸರ್ವಸ್ವವನ್ನೂ ಧಾರೆಯೆರೆಯುತ್ತೇನೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ಸುದೀರ್ಘ ವೃತ್ತಿಜೀವನಕ್ಕೆ ನಿರಂತರ ಬೆಂಬಲ ನೀಡಿದ ಹರ್ಯಾಣ ಕ್ರಿಕೆಟ್ ಸಂಸ್ಥೆ ಹಾಗೂ ಅದರ ಮಾಜಿ ಪದಾಧಿಕಾರಿಗಳಾದ ರಣಬೀರ್ ಸಿಂಗ್ ಮಹಿಂದ್ರಾ ಮತ್ತು ಅನಿರುದ್ಧ್ ಸಿಂಗ್ ಚೌಧರಿ ಅವರಿಗೆ ಚಹಲ್ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.

