ನ್ಯೂಯಾರ್ಕ್: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ (FIFA World Cup) ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿ ವಿರುದ್ಧ 2-1 ಅಂತರದ ಅದ್ಭುತ ಜಯ ಸಾಧಿಸಿದ ಈಕ್ವೆಡಾರ್ ತಂಡದ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಜರ್ಮನಿ ವಿರುದ್ಧ ಗೆಲುವು ದಾಖಲಿಸಿ ನಾಕೌಟ್ ಹಂತಕ್ಕೆ ಅರ್ಹತೆ ಪಡೆದ ಸಂಭ್ರಮದಲ್ಲಿ ಈಕ್ವೆಡಾರ್ ದೇಶದಲ್ಲಿ ರಜಾದಿನವನ್ನು ಘೋಷಿಸಲಾಗಿದೆ.
ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಅವರು ಈ ಘೋಷಣೆ ಮಾಡಿದ್ದಾರೆ. ಈಕ್ವೆಡಾರ್ ತನ್ನ ಆರಂಭಿಕ ಪಂದ್ಯದಲ್ಲಿ ಐವರಿ ಕೋಸ್ಟ್ ವಿರುದ್ಧ 1-0 ಸೋಲು ಕಂಡಿತ್ತು. ಎರಡನೇ ಪಂದ್ಯದಲ್ಲಿ ಕುರಾಕಾವೊ ವಿರುದ್ಧ ಗೋಲುರಹಿತ ಡ್ರಾ ಮಾಡಿಕೊಂಡಿತ್ತು. ಈಗಾಗಲೇ ಅರ್ಹತೆ ಪಡೆದಿರುವ ಜರ್ಮನಿಯ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿ ಬಲ ಪ್ರದರ್ಶಿಸಿದೆ. ಇದನ್ನೂ ಓದಿ: FIFA World Cup| ಮುಸ್ಲಿಂ ಆಟಗಾರರಿಗೆ ವಿಭಿನ್ನ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ನೀಡೋದು ಯಾಕೆ?
ಈಕ್ವೆಡಾರ್ ಗೆಲುವಿನ ನಂತರ, ಅಧ್ಯಕ್ಷ ಡೇನಿಯಲ್ ನೊಬೊವಾ ಅವರು ಆಟಗಾರರು ಮತ್ತು ತರಬೇತುದಾರ ಸೆಬಾಸ್ಟಿಯನ್ ಬೆಕಾಸೆಸ್ ಅವರಿಗೆ ಟೀಕೆಗಳು ಮತ್ತು ಕಷ್ಟಕರ ಕ್ಷಣಗಳನ್ನು ನಿವಾರಿಸಿ ರಾಷ್ಟ್ರಕ್ಕೆ ಹೆಮ್ಮೆ ಮತ್ತು ಸಂತೋಷ ತಂದಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ. ಅವರ ಸಾಧನೆಯ ಸಂಭ್ರಮಾಚರಣೆಯಲ್ಲಿ (ಶುಕ್ರವಾರ) ರಾಷ್ಟ್ರೀಯ ರಜಾದಿನವನ್ನು ಘೋಷಿಸಿದರು.
ಟೀಕೆಗಳು, ಅವಮಾನಗಳು ಮತ್ತು ಅವರು ಅನುಭವಿಸಿದ ಕಠಿಣ ಸಂದರ್ಭಗಳ ಹೊರತಾಗಿಯೂ ಚೇತರಿಸಿಕೊಂಡು ಇಡೀ ದೇಶಕ್ಕೆ ಸಂತೋಷವನ್ನು ತರುವಲ್ಲಿ ಯಶಸ್ವಿಯಾದ ಆಟಗಾರರು ಮತ್ತು ತರಬೇತುದಾರರಿಗೆ ಧನ್ಯವಾದಗಳು. ಶುಕ್ರವಾರ, ರಜಾದಿನ! ಈಕ್ವೆಡಾರ್ ದೀರ್ಘಕಾಲ ಬದುಕಲಿ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಉಜ್ಬೇಕಿಸ್ತಾನ್ ವಿರುದ್ಧ ಅದ್ಭುತ ಗೋಲ್; ಹಲವು ದಾಖಲೆ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ

