ನ್ಯೂಯಾರ್ಕ್: ಫಿಫಾ ವಿಶ್ವಕಪ್ ಫುಟ್‌ಬಾಲ್(FIFA World Cup) ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಪ್ರತಿ ಪಂದ್ಯದ ಮುಕ್ತಾಯದ ನಂತರ ‘ಪ್ಲೇಯರ್ ಆಫ್ ದಿ ಮ್ಯಾಚ್’ (POTM) ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಮುಸ್ಲಿಂ ಆಟಗಾರರಿಗೆ (Muslim Players) ನೀಡಲಾಗುತ್ತಿರುವ ಪ್ರಶಸ್ತಿ ಟ್ರೋಫಿಯು ಇತರ ಆಟಗಾರರಿಗಿಂತ ಭಿನ್ನವಾಗಿದ್ದು, ಕ್ರೀಡಾ ವಲಯದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
ಅಮೆರಿಕನ್ ಮದ್ಯದ ಬ್ರ್ಯಾಂಡ್ ಆದ ಬಡ್‌ವೈಸರ್ (Budweiser) ಈ ಬಾರಿಯ ಫಿಫಾ ವಿಶ್ವಕಪ್‌ನ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿಯ ಅಧಿಕೃತ ಪ್ರಾಯೋಜಕ (Sponsor) ಕಂಪನಿಯಾಗಿದೆ. ನಿಯಮದ ಪ್ರಕಾರ ಈ ಪ್ರಶಸ್ತಿಯನ್ನು ಗೆಲ್ಲುವ ಆಟಗಾರರಿಗೆ ನೀಡಲಾಗುವ ಸಾಂಪ್ರದಾಯಿಕ ಕೆಂಪು ಬಣ್ಣದ ಟ್ರೋಫಿಯ ಮೇಲೆ ‘Budweiser’ ಕಂಪನಿಯ ಲೋಗೋ ಮತ್ತು ಹೆಸರನ್ನು ಪ್ರಮುಖವಾಗಿ ಮುದ್ರಿಸಲಾಗಿರುತ್ತದೆ.
ಇಸ್ಲಾಂ ಧರ್ಮದಲ್ಲಿ ಮದ್ಯಪಾನ ಹಾಗೂ ಮದ್ಯದ ಪ್ರಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಮುಸ್ಲಿಂ ಆಟಗಾರರು ಮದ್ಯದ ಬ್ರ್ಯಾಂಡ್ ಲೋಗೋ ಇರುವ ಟ್ರೋಫಿಯನ್ನು ಹಿಡಿದು ಪೋಸ್ ನೀಡುವುದು ಅಥವಾ ಅದನ್ನು ಸ್ವೀಕರಿಸುವುದು ಅವರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿರುತ್ತದೆ.
ಕ್ರೀಡಾಪಟುಗಳ ಧಾರ್ಮಿಕ ನಂಬಿಕೆಗಳು ಮತ್ತು ಸಂಸ್ಕೃತಿಗೆ ಅತ್ಯುನ್ನತ ಗೌರವ ನೀಡಲು ಮುಂದಾಗಿರುವ ಅಂತರರಾಷ್ಟ್ರೀಯ ಫುಟ್‌ಬಾಲ್ ಒಕ್ಕೂಟ (FIFA) ಮತ್ತು ಪ್ರಾಯೋಜಕ ಸಂಸ್ಥೆ ಬಡ್‌ವೈಸರ್, ಮುಸ್ಲಿಂ ಆಟಗಾರರಿಗಾಗಿಯೇ ಒಂದು ವಿಶೇಷವಾದ ಪರ್ಯಾಯ ವ್ಯವಸ್ಥೆಯನ್ನು ಮಾಡಿದೆ.

ಯಾವುದೇ ಮುಸ್ಲಿಂ ಆಟಗಾರ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿಗೆ ಭಾಜನರಾದಾಗ, ಅವರಿಗೆ ನೀಡಲಾಗುವ ಟ್ರೋಫಿಯ ಮೇಲಿಂದ ‘Budweiser’ ಬ್ರ್ಯಾಂಡ್‌ನ ಲೋಗೋ ಮತ್ತು ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. ಈ ವಿಶೇಷ ಟ್ರೋಫಿಯು ಕೇವಲ ಪಂದ್ಯದ ಶ್ರೇಷ್ಠತೆಯನ್ನು ಬಿಂಬಿಸುವ ಫಿಫಾ ಅಧಿಕೃತ ವಿನ್ಯಾಸವನ್ನು ಮಾತ್ರ ಒಳಗೊಂಡಿರುತ್ತದೆ.
ಈ ಹಿಂದೆ ನಡೆದಿದ್ದ ವಿಶ್ವಕಪ್‌ಗಳಲ್ಲಿ ಮುಸ್ಲಿಂ ಆಟಗಾರರಾದ ಮೊಹಮ್ಮದ್ ಸಲಾಹ್ (ಈಜಿಪ್ಟ್), ಕರೀಂ ಬೆಂಜೆಮಾ (ಫ್ರಾನ್ಸ್) ಮತ್ತು ಯಾಸಿನ್ ಬೌನೊ (ಮೊರಾಕೊ) ಅವರಂತಹ ಪ್ರಮುಖ ತಾರೆಗಳು ಮದ್ಯದ ಬ್ರ್ಯಾಂಡ್ ಲೋಗೋ ಇದ್ದ ಕಾರಣಕ್ಕಾಗಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ನಿರಾಕರಿಸಿದ್ದರು.
ಆಟಗಾರರ ಈ ನಿಲುವನ್ನು ಗೌರವಿಸಿರುವ ಫಿಫಾ, 2026ರ ವಿಶ್ವಕಪ್‌ನಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಮುಂಚಿತವಾಗಿಯೇ ಈ ಪ್ರಗತಿಪರ ನಿಯಮವನ್ನು ಜಾರಿಗೆ ತಂದಿದೆ. ಕ್ರೀಡಾಂಗಣದಲ್ಲಿ ವೈವಿಧ್ಯತೆ ಮತ್ತು ಧಾರ್ಮಿಕ ಆಚರಣೆಗಳನ್ನು ಗೌರವಿಸುವ ಫಿಫಾದ ಈ ನಿರ್ಧಾರಕ್ಕೆ ಜಾಗತಿಕವಾಗಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
