ಚಿಕ್ಕಬಳ್ಳಾಪುರ: ನಂದಿ ಬೆಟ್ಟಕ್ಕೆ ಪ್ರವಾಸಕ್ಕೆ ಹೋಗುವ ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಹಾಗಾದ್ರೆ ಈ ಸುದ್ದಿ ಗಮನಿಸಿ. ನವೆಂಬರ್ 20ರಂದು ನಂದಿಬೆಟ್ಟದ (Nandi Hills) ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರವನ್ನ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಬೆಂಗಳೂರು ಬೈಸಿಕಲ್ ಚಾಂಪಿಯನ್ಶಿಪ್ (BBCh) ವತಿಯಿಂದ ಸಮುದಾಯ ಸೈಕ್ಲಿಂಗ್ ಕಾರ್ಯಕ್ರಮ ಆಯೋಜಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.
ನವೆಂಬರ್ 20ರ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಂದಿಬೆಟ್ಟದ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR) ಯಿಂದ ನಂದಿ ಬೆಟ್ಟದವರೆಗೆ ನಡೆಯಲಿರುವ ಸೈಕ್ಲಿಂಗ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈಕ್ಲಿಸ್ಟ್ಗಳು ಭಾಗವಹಿಸುವ ನಿರೀಕ್ಷೆಯಿದೆ.
ಸೈಕ್ಲಿಸ್ಟ್ಗಳ ಸುರಕ್ಷತೆ ಹಾಗೂ ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ 17 ವರ್ಷಗಳಿಂದ ಬೆಂಗಳೂರು ಬೈಸಿಕಲ್ ಚಾಂಪಿಯನ್ಶಿಪ್ ಸಮುದಾಯ ಸೈಕ್ಲಿಂಗ್ ಕಾರ್ಯಕ್ರಮಗಳನ್ನ ಆಯೋಜಿಸುತ್ತಿದ್ದು, ಆರೋಗ್ಯಕರ ಜೀವನಶೈಲಿ, ಪರಿಸರ ಸ್ನೇಹಿ ಸಾರಿಗೆ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಇನ್ನು ಆಂಬುಲೆನ್ಸ್, ಅಗ್ನಿಶಾಮಕ, ಪೊಲೀಸ್ ಸೇರಿದಂತೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ. ಪರ್ಯಾಯ ಮಾರ್ಗಗಳ ಕುರಿತು ಸೂಚನಾ ಫಲಕಗಳನ್ನ ಅಳವಡಿಸುವುದು ಹಾಗೂ ಸಂಚಾರ ನಿಯಂತ್ರಣಕ್ಕಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ. ಮಧ್ಯಾಹ್ನ 12 ಗಂಟೆಯ ಬಳಿಕ ಎಂದಿನಂತೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಹೀಗಾಗಿ ನವೆಂಬರ್ 20ರಂದು ಬೆಳಿಗ್ಗೆ ನಂದಿ ಬೆಟ್ಟಕ್ಕೆ ತೆರಳುವ ಪ್ರವಾಸಿಗರು ಹಾಗೂ ಸಾರ್ವಜನಿಕರು ಜಿಲ್ಲಾಡಳಿತದ ಸೂಚನೆ ಪಾಲಿಸಿ ಸಹಕರಿಸುವಂತೆ ಮನವಿ ಮಾಡಲಾಗಿದೆ.

