ಬೆಂಗಳೂರು: ಮನ್ರೇಗಾದ ಬದಲಾದ ರೂಪವಾದ ವಿಬಿಜಿ ರಾಮ್ ಜಿ ಅಡಿ ಅರ್ಹ ಫಲಾನುಭವಿಗಳಿಗೆ ಉದ್ಯೋಗ ನೀಡಲು (Job Card Fair) ಒಂದು ವಾರದೊಳಗೆ ಜಾಬ್ ಕಾರ್ಡ್ ಮೇಳ ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ (Eshwar Khandre) ಸೂಚಿಸಿದ್ದಾರೆ.
ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, ನಿಷ್ಕ್ರಿಯ ಉದ್ಯೋಗದ ಚೀಟಿ (ಜಾಬ್ ಕಾರ್ಡ್)ಗಳನ್ನು ರದ್ದು ಮಾಡಲಾಗಿದೆ. ಆದರೆ ಬಡ ಗ್ರಾಮೀಣ ಕುಟುಂಬಗಳಿಗೆ ಅನ್ಯಾಯವಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ.
ಹೊಸದಾಗಿ ಉದ್ಯೋಗ ಬಯಸುವ ಅರ್ಹ ಗ್ರಾಮೀಣ ಕುಟುಂಬಗಳ ಫಲಾನುಭವಿಗಳಿಗೆ, ಅಂದರೆ ಪರಿಶಿಷ್ಟ ಜಾತಿ, ಪಂಗಡದವರು, ಅಲ್ಪಸಂಖ್ಯಾತರು, ವಿಶೇಷ ಚೇತನರು, ಮಹಿಳಾ ನೇತೃತ್ವದ ಕುಟುಂಬದವರು, ಭೂರಹಿತ ಕೂಲಿ ಕಾರ್ಮಿಕರು ಸೇರಿದಂತೆ ಉದ್ಯೋಗ ಕೇಳುವ ಎಲ್ಲ ಅರ್ಹರಿಗೆ ತತ್‌ಕ್ಷಣವೇ ಜಾಬ್ ಕಾರ್ಡ್ ನೀಡಲು 5,927 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ವಾರದೊಳಗಾಗಿ ಜಾಬ್ ಕಾರ್ಡ್ ಮೇಳ ನಡೆಸಿ, ಉದ್ಯೋಗ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಸ್ನ್ಯಾಕ್ಸ್ ಪ್ಯಾಕೆಟ್‌ಗಲ್ಲಿ ಗಾಂಜಾ ಚಾಕ್ಲೆಟ್ ಇಟ್ಟು ಮಾರಾಟ – ಆರೋಪಿ ಅರೆಸ್ಟ್
ವಿಬಿಜಿ ರಾಮ್ ಜಿ ಅಡಿ ಕೇಂದ್ರದ ಶೇ.60ರಷ್ಟು ಅನುದಾನ 1,700 ಕೋಟಿ ರೂ. ಹಾಗೂ ರಾಜ್ಯದ ಶೇ.40ರಷ್ಟು ಅನುದಾನ 1,200 ಕೋಟಿ ಸೇರಿ ಒಟ್ಟು 2,900 ಕೋಟಿ ರೂ. ಒದಗಿಸಲಾಗಿದೆ. ಈ ಪೈಕಿ ಕೂಲಿ ನೀಡಿಕೆಗಾಗಿ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೆ 1,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹಣದ ಕೊರತೆ ಇಲ್ಲದಿದ್ದಾಗ್ಯೂ ಕೆಲವು ಗ್ರಾಮ ಪಂಚಾಯತಿಗಳಲ್ಲಿ ವಿಬಿಜಿ ರಾಮ್ ಜಿ ಅನುಷ್ಠಾನ ತೃಪ್ತಿದಾಯಕವಾಗಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದಿರುವ ಈಶ್ವರ ಖಂಡ್ರೆ, ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿ ಒದಗಿಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಹೋಟೆಲ್‌ಗಳ ಮೇಲೆ ಮುಂದುವರೆದ ಫುಡ್ ಸೇಫ್ಟಿ ರೇಡ್; 26 ಕಡೆ ದಾಳಿ, 11 ರೆಸ್ಟೋರೆಂಟ್‌ಗಳಿಗೆ ನೋಟಿಸ್




