ಹಾಸನ: ಇಟಿಎಫ್ (Elephant Task Force) ಸಿಬ್ಬಂದಿಯನ್ನು ಮದದಲ್ಲಿದ್ದ ಒಂಟಿ ಸಲಗವೊಂದು (Elephant) ಅಟ್ಟಾಡಿಸಿದ ಘಟನೆ ಬೇಲೂರು (Belur) ತಾಲೂಕಿನ ಗಂಗಾವರ ಗ್ರಾಮದಲ್ಲಿ ನಡೆದಿದೆ.
ಕಾಡಾನೆ ರಸ್ತೆ ದಾಟುವಾಗ ಇಟಿಎಫ್ ಸಿಬ್ಬಂದಿ ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿಕೊಂಡು ನಿಂತಿದ್ದರು. ಈ ವೇಳೆ ಏಕಾಏಕಿ ಕಾಡಾನೆ ಇಟಿಎಫ್ ಸಿಬ್ಬಂದಿಯನ್ನು ಅಟ್ಟಾಡಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗಂಗಾವರ ಸುತ್ತಮುತ್ತಲ ಗ್ರಾಮಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಆರು ಕುಮ್ಕಿ ಆನೆಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಪುಂಡಾನೆ – ಸೆರೆ ಬಳಿಕ ಹಗ್ಗ ಕಿತ್ತೆಸೆದು ಕಾಡಿಗೆ ಜೂಟ್!
ಕಾಡಾನೆ ರಸ್ತೆ ದಾಟುತ್ತಿದ್ದ ವೇಳೆ ಎರಡು ಕಡೆಗಳಲ್ಲಿ ಸಾರಿಗೆ ಬಸ್, ಅರಣ್ಯ ಇಲಾಖೆ ಜೀಪ್ ಸೇರಿದಂತೆ ಇತರೆ ವಾಹನಗಳನ್ನು ನಿಲ್ಲಿಸಲಾಗಿತ್ತು. ಈ ವೇಳೆ ಜನರಿದ್ದ ಕಡೆಗೆ ಒಂಟಿಸಲಗ ನುಗ್ಗಿದ್ದು ಇಟಿಎಫ್ ಸಿಬ್ಬಂದಿ ಹಾಗೂ ಜನರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ಗ್ರಾಮದ ಶಾಲೆಯ ಮುಂಭಾಗ, ವಾಸದ ಮನೆಗಳ ಮುಂದೆಯೇ ಒಂಟಿಸಲಗ ಹಾದು ಹೋಗಿದ್ದು, ಕಾಡಾನೆ ಕಂಡು ಮಹಿಳೆಯರು ಹೌಹಾರಿದ್ದಾರೆ. ಎರಡು ದೈತ್ಯಾಕಾರದ ಕಾಡಾನೆಗಳು ಮದದಲ್ಲಿದ್ದು ಪಟಾಕಿ ಸಿಡಿಸಿ ಕಾಡಿಗಟ್ಟಲು ಇಟಿಎಫ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಪಟಾಕಿ ಸಿಡಿಸುತ್ತಿರುವುದರಿಂದ ಕಾಡಾನೆಗಳು ಚದುರಿವೆ.
ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು, ಕೂಲಿ ಕಾರ್ಮಿಕರು ಭಯಭೀತರಾಗಿದ್ದಾರೆ. ಕಾಡಾನೆಗಳ ಚಲನವಲನದ ಬಗ್ಗೆ ಇಟಿಎಫ್ ಸಿಬ್ಬಂದಿ ಮೈಕ್ ಮೂಲಕ ಅನೌನ್ಸ್ ಮಾಡಿ ಸ್ಥಳೀಯರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇದನ್ನೂ ಓದಿ: ಸಿಟ್ಟಿಗೆದ್ದು ಅಟ್ಟಾಡಿಸಿದ ಕಾಡಾನೆ – ಓಡಿ ಓಡಿ ಪಾರಾದ ಇಟಿಎಫ್ ಸಿಬ್ಬಂದಿ!
