ಬೆಳಗಾವಿ: ಕೆಎಲ್‌ಇ ಆಸ್ಪತ್ರೆಯಲ್ಲಿ (KLE Hospital) ಕಳೆದ 40 ವರ್ಷಗಳಿಂದ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ. ದಿನೇಶ್ ಭಟ್ಕಳ್ (Dr. Dinesh Bhatkal) ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಾ.ದಿನೇಶ್ ಭಟ್ಕಳ್ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದವರು. ಆದರೆ, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಸುಮಾರು 40 ವರ್ಷಗಳ ಕಾಲ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಇವರಿಗೆ ಶ್ವಾಸಕೋಶ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಚಿಕಿತ್ಸೆಗಾಗಿಯೇ ತಮ್ಮೂರು ಬಿಟ್ಟು ಬೆಳಗಾವಿಯ ಟಿಳಕವಾಡಿಯ ಮಂಡೋಲಿ ರಸ್ತೆಯಲ್ಲಿ ಮನೆ ಮಾಡಿಕೊಂಡು ಕುಟುಂಬಸ್ಥರೊಂದಿಗೆ ವಾಸವಿದ್ದರು.
ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಸಹಿಸಲಾಗದ ನೋವನ್ನು ಅನುಭವಿಸುತ್ತಿದ್ದರು ಎನ್ನಲಾಗಿದೆ. ತಮಗಾಗುತ್ತಿರುವ ನೋವಿನ ಕುರಿತು ಆಗಾಗ ತಮ್ಮ ಸ್ನೇಹಿತರೊಡನೆ ಹಂಚಿಕೊಳ್ಳುತ್ತಿದ್ದರು. ಇಂದೂ ಸಹ ಬೆಳಗ್ಗೆ ಎದ್ದ ತಕ್ಷಣ ದಿನೇಶ್ ಅವರಿಗೆ ಎದೆಯಲ್ಲಿ ಸಹಿಸಲಾಗದ ನೋವು ಕಾಣಿಸಿಕೊಂಡಿದೆ. ಹೀಗಾಗಿ, ಅವರು ತಮ್ಮ ಮನೆಯಲ್ಲಿದ್ದ ರಿವಾಲ್ವಾರ್ ತೆಗೆದುಕೊಂಡು ಮನೆಯ ಗ್ಯಾಲರಿ ಬಳಿ ಹೋಗಿ ಅಲ್ಲಿಯೇ ತಲೆಗೆ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾರೆ.
ವೈದ್ಯ ದಿನೇಶ್ ಆತ್ಮಹತ್ಯೆಗೆ ಶರಣಾಗುವ ಮುನ್ನ ತಮ್ಮ ಹಿತೈಷಿಗಳು ಹಾಗೂ ಮಾರ್ಗದರ್ಶಕರಿಗೆ ವಾಟ್ಸಪ್ ಸಂದೇಶ ರವಾನಿಸಿದ್ದಾರೆ. ಅದರಲ್ಲಿ ಕೆಎಲ್‌ಇ ಮಾಜಿ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆಯವರಿಗೂ ಸಹ ವಾಟ್ಸಪ್ ಸಂದೇಶ ಕಳಿಸಿದ್ದಾರೆ. ‘ನನಗೆ ನೀವು ಇಷ್ಟು ವರ್ಷ ಸಹಾಯ ಮಾಡಿದ್ದೀರಿ. ಆದರೆ, ನನಗೆ ತೀವ್ರವಾದ ಎದೆ ನೋವಿದೆ. ಅದರಿಂದ ನಾನು ಬಳಲುತ್ತಿದ್ದೇನೆ. ಆದ್ದರಿಂದ ನಾನು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಮಾಡಿ. ನಗರ ಪೊಲೀಸ್ ಆಯುಕ್ತರಿಗೂ ಮಾಹಿತಿ ನೀಡಿ’ ಎಂದು ಸಂದೇಶ ಕಳುಹಿಸಿದ್ದಾರೆ.
ಡಾ. ದಿನೇಶ್ ಅವರ ಆತ್ಮಹತ್ಯೆಯ ಸುದ್ದಿ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ನಾರಾಯಣ ಭರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿಯ ಬೀಮ್ಸ್ ಆಸ್ಪತ್ರಗೆ ರವಾನಿಸಿದ್ದಾರೆ.

