ಬಳ್ಳಾರಿ: ರಾಜ್ಯ ಸರ್ಕಾರ 2015 ರಲ್ಲಿ ಹೊರಡಿಸಿದ ಆದೇಶವನ್ನು ಮುಂದಿಟ್ಟುಕೊಂಡು ಬಿಜೆಪಿ(BJP) ಬಳ್ಳಾರಿ ಪಾದಯಾತ್ರೆಯ(Ballari Padayatre) ಸಮಾರೋಪ ಸಮಾರಂಭಕ್ಕೆ ಅನುಮತಿ ನೀಡಲು ನಿರಾಕರಿಸಿದ್ದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಗರದಲ್ಲಿ ಸೆಪ್ಟೆಂಬರ್ 10ರಂದು ಆಯೋಜಿಸಲು ಉದ್ದೇಶಿಸಲಾಗಿದ್ದ ಬಿಜೆಪಿಯ ಬೃಹತ್ ಬಹಿರಂಗ ಸಮಾವೇಶಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು (ಎಕ್ಸ್ ಮುನ್ಸಿಪಲ್ ಶಾಲೆ) ಮೈದಾನವನ್ನು (Ground) ಬಳಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಮತಿ ನಿರಾಕರಿಸಿದೆ.
ಬಿಜೆಪಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಅವರು ಸೆ.7ರಂದು ಮನವಿ ಸಲ್ಲಿಸಿ, ಸೆ.10ರಂದು ಮಧ್ಯಾಹ್ನ 3 ರಿಂದ ಸಂಜೆ 8 ಗಂಟೆಯವರೆಗೆ ಸಮಾವೇಶ ನಡೆಸಲು ಮೈದಾನ ನೀಡುವಂತೆ ಕೋರಿದ್ದರು.
ಈ ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಹಾಗೂ 50 ಸಾವಿರಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿತ್ತು.
ನಿರಾಕರಿಸಿದ್ದು ಯಾಕೆ?
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ 2015 ರ ಜೂನ್ 11ರ ಅಧಿಕೃತ ಸುತ್ತೋಲೆಯನ್ನು ಉಲ್ಲೇಖಿಸಿ ಬಳ್ಳಾರಿ ವಿಜಯನಗರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಮೈದಾನ ಹಾಗೂ ಕಟ್ಟಡಗಳನ್ನು ಖಾಸಗಿ ಸಂಘ-ಸಂಸ್ಥೆಗಳ ಸಾರ್ವಜನಿಕ ಅಥವಾ ಖಾಸಗಿ ಸಮಾರಂಭಗಳಿಗೆ, ಪ್ರದರ್ಶನಗಳಿಗೆ, ವ್ಯಾಪಾರ ಮಳಿಗೆಗಳಿಗೆ ಹಾಗೂ ಮನೋರಂಜನಾ ಕಾರ್ಯಕ್ರಮಗಳಿಗೆ ನೀಡಬಾರದು ಎಂದು ಕಟ್ಟುನಿಟ್ಟಿನ ಆದೇಶವಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆ ಇರುವುದರಿಂದ, ಬಿಜೆಪಿ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಹೈಕೋರ್ಟ್‌ನಲ್ಲಿದೆ ಅರ್ಜಿ
ಸರ್ಕಾರಿ ಆಸ್ತಿಗಳಾದ ಶಾಲೆ, ಪಿಯು ಕಾಲೇಜುಗಳ ಮೈದಾನ, ಉದ್ಯಾನವನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯವೆಂದು ಕಳೆದ ವರ್ಷದ ಅಕ್ಟೋಬರ್ 18 ರಂದು ಸಚಿವ ಸಂಪುಟವು ನಿರ್ಧರಿಸಿ ಮಾರ್ಗಸೂಚಿ ಹೊರಡಿಸಿತ್ತು. ಸರ್ಕಾರಿ ಆಸ್ತಿಗಳಾದ ಶಾಲೆಗಳು, ಪಿಯು ಕಾಲೇಜುಗಳ ಮೈದಾನ, ಉದ್ಯಾನವನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳು ಅಥವಾ ಗುಂಪುಗಳು ಯಾವುದೇ ಕಾರ್ಯಕ್ರಮ ಅಥವಾ ಸಮಾವೇಶ ನಡೆಸಲು ಪೂರ್ವಾನುಮತಿ ಪಡೆಯುವುದು ಈ ಆದೇಶದ ಅನ್ವಯ ಕಡ್ಡಾಯವಾಗಿತ್ತು.
ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈ ಹಿಂದೆ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ವಿಚಾರಣೆ ನಡೆಸುತ್ತಿದೆ. ಹೀಗಿದ್ದರೂ 2015 ರ ಆದೇಶದ ಅನ್ವಯ ಬಿಜೆಪಿ ಸಮಾವೇಶಕ್ಕೆ ಮೈದಾನ ನಿರಾಕರಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
