– ಶಿವಂ ಅಸೋಸಿಯೇಟ್ಸ್ 2,459 ಕೋಟಿ ರೂ. ವಂಚನೆ ಕೇಸ್
ಬೆಂಗಳೂರು: ಶಿವಂ ಅಸೋಸಿಯೇಟ್ ಮಾಲೀಕ ಶಿವಾನಂದ ನೀಲಣ್ಣನವರ್ಗೆ (Shivananda Neelannavar) ಇ.ಡಿ ಶಾಕ್ ಕೊಟ್ಟಿದೆ. ಬರೋಬ್ಬರಿ 427 ಕೋಟಿ ರೂ. ಮೌಲ್ಯದ ಆಸ್ತಿ ಸೀಜ್ ಮಾಡಲಾಗಿದೆ.
ಫಿಕ್ಸೆಡ್ ಡೆಪಾಸಿಟ್, ಬ್ಯಾಂಕ್ ಖಾತೆ, ಷೇರು ಹೂಡಿಕೆ, ಕೃಷಿ ಜಮೀನು, ಬಂಗಲೆ ಜಪ್ತಿ ಮಾಡಿದೆ. ಶಿವಂ ಅಸೋಸಿಯೇಟ್ಸ್ನಿಂದ 2,459 ಕೋಟಿ ರೂ. ವಂಚನೆ ಆಗಿರುವುದು ಇ.ಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬರೋಬ್ಬರಿ 427 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಪೈಕಿ 47 ಬ್ಯಾಂಕ್ ಖಾತೆಗಳಲ್ಲಿದ್ದ 44 ಕೋಟಿ ಹಣ ಸೀಜ್ ಮಾಡಲಾಗಿದೆ. ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದ 367 ಕೋಟಿ, ಬ್ಯಾಂಕ್ ಖಾತೆಯಲ್ಲಿದ್ದ 44 ಕೋಟಿ, ಸ್ಥಿರಾಸ್ತಿಗಳು 13 ಕೋಟಿ, ಷೇರು ಮಾರುಕಟ್ಟೆ 1.31 ಕೋಟಿ ಸೇರಿದಂತೆ ಒಟ್ಟು 427 ಕೋಟಿ ರೂ. ಸೀಜ್ ಮಾಡಲಾಗಿದೆ. ಇದನ್ನೂ ಓದಿ: 35,000 ಜನಕ್ಕೆ 2,165 ಕೋಟಿ ವಂಚನೆ – ಶಿವಾನಂದ್ ನೀಲಣ್ಣನವರ್ ವಿರುದ್ಧ ಇಡಿ ಅಧಿಕಾರಿಗಳಿಂದ ಚಾರ್ಜ್ಶೀಟ್
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಪ್ರಾಥಮಿಕ ತನಿಖೆ ವೇಳೆ ಅಕ್ರಮ ಹಣ ವರ್ಗಾವಣೆ ಆಗಿರುವ ವಿಚಾರ ಗೊತ್ತಾಗ್ತಿದ್ದಂತೆ ಇ.ಡಿ ಎಂಟ್ರಿ ಕೊಟ್ಟಿದೆ. 2026ರ ಆಗಸ್ಟ್ ತಿಂಗಳಲ್ಲಿ ಬೆಳಗಾವಿ, ಚಿಕ್ಕೋಡಿ ಸೇರಿ 8 ಸ್ಥಳಗಳಲ್ಲಿ ಇ.ಡಿ ರೇಡ್ ಮಾಡಿತ್ತು. ಈ ವೇಳೆ ದಾಖಲೆ, ಕೈಬರಹದ ಲೆಕ್ಕಪತ್ರಗಳು, ಮೊಬೈಲ್ ಸೇರಿದಂತೆ ಡಿಜಿಟಲ್ ಸಾಕ್ಷ್ಯ ಸೀಜ್ ಮಾಡಲಾಗಿತ್ತು.
ಹಣ ಹೇಗೆ ಸಂಗ್ರಹಿಸಲಾಗಿದೆ, ವರ್ಗಾಯಿಸಲಾಗಿದೆ ಮತ್ತು ಎಲ್ಲಿ ಹೂಡಿಕೆ ಆಗಿದೆ ಅನ್ನೋದು ಬಯಲಾಗಿತ್ತು. ಶಿವಾನಂದ ನೀಲಣ್ಣನವರ್ನನ್ನು ಆಗಸ್ಟ್ 8ರಂದು ಬಂಧಿಸಲಾಗಿತ್ತು. ತನಿಖೆ ವೇಳೆ 35,000 ಕ್ಕೂ ಹೆಚ್ಚು ಹೂಡಿಕೆದಾರರಿಂದ 2,459 ಕೋಟಿ ರೂ. ಹಣ ಸಂಗ್ರಹಿಸಿರುವ ವಿಚಾರ ಬಯಲಾಗಿದೆ. ಅಕ್ಟೋಬರ್ 9ರಂದು ಶಿವಾನಂದ್ ನೀಲಣ್ಣನವರ್ ಸೇರಿ ಐವರ ಮೇಲೆ ಇ.ಡಿ ಚಾರ್ಜ್ಶೀಟ್ ಮಾಡಿದೆ.
ಮಂಗಳೂರಿನ ಪಿಎಂಎಲ್ಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಹೂಡಿಕೆದಾರರಿಂದ ಸಂಗ್ರಹಿಸಿದ ಹಣ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿತ್ತು. ಇದರಿಂದ 185.95 ಕೋಟಿ ರೂ. ನಿವ್ವಳ ನಷ್ಟ ಉಂಟಾಗಿತ್ತು ಅನ್ನೋದು ತನಿಖೆಯಲ್ಲಿ ಬಯಲಾಗಿದೆ. ಸುಮಾರು 25 ಕೋಟಿ ರೂ. ಹಣ ಎರಡು ಸಹಕಾರಿ ಕ್ರೆಡಿಟ್ ಸೊಸೈಟಿಗಳ ಮೂಲಕ ವರ್ಗಾಯಿಸಲಾಗಿತ್ತು. ಇದನ್ನೂ ಓದಿ: ಕೋಟಿ ಕೋಟಿ ವಂಚನೆ ಕೇಸ್ | ಶಿವಾನಂದ ನೀಲಣ್ಣನವರ್ ಅರೆಸ್ಟ್ – 12 ದಿನಗಳ ಕಾಲ ಇಡಿ ಕಸ್ಟಡಿಗೆ
ಫಿಕ್ಸೆಡ್ ಡೆಪಾಸಿಟ್ ಸೃಷ್ಟಿಸಿ, ಅದರ ಆಧಾರದಲ್ಲಿ ಸಹಚರರ ಹೆಸರಿನಲ್ಲಿ ಸಾಲ ಪಡೆಯಲಾಗಿತ್ತು. ಈ ಸಾಲದ ಹಣವನ್ನು ಜಮೀನು ಖರೀದಿಸಲು ಬಳಸಲಾಗಿತ್ತು. ಪತ್ನಿ ಸಂಗೀತಾ ಮತ್ತು ಮಗ ಸಿದ್ಧಾಂತ್ ಬ್ಯಾಂಕ್ ಖಾತೆಗಳಿಗೂ ವರ್ಗಾಯಿಸಲಾಗಿತ್ತು.
