ಬೆಂಗಳೂರು: ಪೊಲೀಸ್ ಕ್ವಾರ್ಟಸ್‌ನಲ್ಲೇ ನೇಣುಬಿಗಿದುಕೊಂಡು ಕಾನ್‌ಸ್ಪೇಬಲ್ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ಪುರ (KR Pura) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ.
ಲಕ್ಷ್ಮೀ ಪ್ರಿಯಾ (26) ಆತ್ಮಹತ್ಯೆಗೆ ಶರಣಾದ ಮಹಿಳೆ. ಮೃತಳ ತಂದೆ ಕುಮಾರ್ ಆರಾಧ್ಯ ಅವರು ನೀಡಿದ ದೂರಿನ ಮೇರೆಗೆ ಹೆಚ್‌ಎಎಲ್ ಠಾಣೆಯ (HAL Police Station) ಕಾನ್‌ಸ್ಟೇಬಲ್ ರಾಜೇಶ್ ಹಾಗೂ ತಂದೆ-ತಾಯಿ ಸೇರಿದಂತೆ ನಾಲ್ವರ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: AI ವಿಡಿಯೋ ಹಲ್‌ಚಲ್, ದುರುಳರಿಗೆ ಎಚ್ಚರಿಕೆ ಕೊಟ್ಟ ʻಕನಕವತಿʼ – ಹಿಂದಿರುವ ಸೂತ್ರಧಾರ ಯಾರು?
ದೂರಿನಲ್ಲಿ ಏನಿದೆ?
ಮೈಸೂರು (Mysuru) ಮೂಲದ ಲಕ್ಷ್ಮೀ ಪ್ರಿಯಾಗೆ 2023ರಲ್ಲಿ ಕಾನ್‌ಸ್ಟೇಬಲ್ ಜೊತೆ ಮದುವೆಯಾಗಿತ್ತು. ಈ ವೇಳೆ 350 ಗ್ರಾಂ ಚಿನ್ನ, 1 ಕೆ.ಜಿ.ಬೆಳ್ಳಿ ಹಾಗೂ ಗೃಹ ಬಳಕೆ ವಸ್ತುಗಳು ನೀಡಲಾಗಿತ್ತು. ದಂಪತಿಗೆ 8 ತಿಂಗಳ ಹೆಣ್ಣು ಮಗುವಿದೆ. ಮದುವೆಯಾದ ಕೆಲ ತಿಂಗಳ ಬಳಿಕ ವರದಕ್ಷಿಣೆ ಹಣಕ್ಕಾಗಿ ಪತಿ ಪೀಡಿಸುತ್ತಿದ್ದ. ಬಾಣಂತನಕ್ಕಾಗಿ ತವರು ಮನೆಗೆ ಬಂದಾಗಲೂ ಮಾನಸಿಕ ಬೆಂಬಲ ಹಾಗೂ ಆರೈಕೆ ಮಾಡದೇ ಕಿರುಕುಳ ನೀಡಿದ್ದ.
ಈ ಮಧ್ಯೆ ಇನ್ನೋರ್ವ ಯುವತಿಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ. ಇದನ್ನು ನನ್ನು ಮಗಳು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುವುದನ್ನ ಮುಂದುವರೆಸಿದ್ದ. ಮೇ 22ರಂದು ತನ್ನ ಮಗಳು ವಾಟ್ಸಾಪ್‌ನಲ್ಲಿ ಮೊಬೈಲ್ ಪಾಸ್‌ವರ್ಡ್ ಕಳುಹಿಸಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ರಾಜೇಶ್ ಹಾಗೂ ಆತನ ಮನೆಯವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತಳ ತಂದೆ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ
ವರದಕ್ಷಿಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಪೊಲೀಸರು, ರಾಜೇಶ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೇಲ್ನೋಟಕ್ಕೆ ವರದಕ್ಷಣೆ ಕಿರುಕುಳ ನೀಡದಿರುವುದು ಕಂಡುಬಂದಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ದೂರಿನಲ್ಲಿ ತಿಳಿಸಿದಂತೆ ಯುವತಿ ಜೊತೆ ಅಕ್ರಮ ಸಂಬಂಧ ಇರುವ ಬಗ್ಗೆ ಖಚಿತವಾಗಿಲ್ಲ. ಸದ್ಯ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೆಮಿಕಲ್ ಸೋರಿಕೆ – ಕ್ಯಾಲಿಫೋರ್ನಿಯಾದಲ್ಲಿ 40 ಸಾವಿರ ಜನರ ಸ್ಥಳಾಂತರಕ್ಕೆ ಸೂಚನೆ
