ನವದೆಹಲಿ: ರಾಷ್ಟ್ರ ರಾಜಧಾನಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಹೊರಗೆ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಧರಣಿ ಕಾವು ಪಡೆದುಕೊಳ್ಳುತ್ತಿದ್ದಂತೆ ದೆಹಲಿ ಪೊಲೀಸರು ಪೆಲೆಟ್ ಗನ್ (Pellet Gun) ಬಳಕೆ ದೂರಿನ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.
ನೀಟ್ ಪ್ರತಿಭಟನೆಯ (NEET Protest) ವೇಳೆ ನಡೆದ ಪೆಲೆಟ್ ದಾಳಿಯಲ್ಲಿ ಗಾಯಗೊಂಡ ಸಂತ್ರಸ್ತ ವಿದ್ಯಾರ್ಥಿಯೊಂದಿಗೆ ಸಂಸತ್ ರಸ್ತೆಯ ಪೊಲೀಸ್ ಠಾಣೆಗೆ ತೆರಳಿ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಧರಣಿ ಕುಳಿತಿದ್ದರು. ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಸಂತ್ರಸ್ತ ವಿದ್ಯಾರ್ಥಿಯೊಂದಿಗೆ ಧರಣಿಯಲ್ಲಿ ಪಾಲ್ಗೊಂಡಿದ್ದರು. FIR ದಾಖಲಿಸುವವರೆಗೆ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಕೊನೆಗೆ ಪ್ರತಿಭಟನೆಗೆ ಮಣಿದ ಪೊಲೀಸರು (Delhi Police), ಸಂತ್ರಸ್ತ ವಿದ್ಯಾರ್ಥಿ ಸಾಹಿಲ್ ದೂರು ಆಧರಿಸಿ ರಾಹುಲ್ ಗಾಂಧಿ ಸಮ್ಮುಖದಲ್ಲೇ ಎಫ್‌ಐಆರ್ ದಾಖಲಿಸಿಕೊಂಡರು. ಎಫ್‌ಐಆರ್ ದಾಖಲಿಸಿದ ಬಳಿಕ ಪ್ರತಿಭಟನಾ ಸ್ಥಳದಿಂದ ರಾಹುಲ್ ತೆರಳಿದರು.

ಪೊಲೀಸರ ಮನವಿಗೂ ಬಗ್ಗದ ರಾಗಾ
ಇದಕ್ಕೂ ಮುನ್ನ ರಾಹುಲ್ ಗಾಂಧಿ ಬೇಡಿಕೆಗೆ ಪ್ರತಿಕ್ರಿಯಿಸಿದ್ದ ದೆಹಲಿ ಪೊಲೀಸರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗಾಗಲೇ ಉನ್ನತ ಮಟ್ಟದ ಸಮಿತಿ ರಚಿಸಿದೆ ಎಂದು ಮನವರಿಕೆ ಮಾಡಿದ್ದರು. ಪೊಲೀಸರ ಪ್ರತಿಕ್ರಿಯೆಗೆ ಜಗ್ಗದ ರಾಹುಲ್ ಗಾಂಧಿ ಎಫ್‌ಐಆರ್ ದಾಖಲಾಗುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ರಾಹುಲ್ ಪಟ್ಟು ಹಿಡಿದಿದ್ದರು.
ಧರಣಿ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಹುಲ್ ಗಾಂಧಿ, ಜುಲೈ 20 ರಂದು ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಾಹಿಲ್ ಮೇಲೆ ಪೊಲೀಸರು ಪೆಲೆಟ್ ಗನ್‌ನಿಂದ ದಾಳಿ ನಡೆಸಿದ್ದಾರೆ. ಇದರಿಂದಾಗಿ ಆತನ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಆರೋಪಿಸಿದ್ದರು.
ನೀಲಿ ಬಣ್ಣದ ಮುಚ್ಚಳವಿದ್ದ ಸಣ್ಣ ಪ್ಲಾಸ್ಟಿಕ್ ಬಾಕ್ಸ್ನಲ್ಲಿದ್ದ ಪೆಲೆಟ್‌ಗಳನ್ನು ಅಂಗೈ ಮೇಲೆ ಹಾಕಿ ಮಾಧ್ಯಮಗಳಿಗೆ ತೋರಿಸಿದ ರಾಹುಲ್ ಗಾಂಧಿ, ಇವು ಪೆಲೆಟ್‌ಗಳು, ಇವುಗಳನ್ನು ಚೆನ್ನಾಗಿ ನೋಡಿ. ಇವು ಎಲ್ಲಿಂದ ಬಂದವು ಗೊತ್ತಾ? ಸಾಹಿಲ್‌ನ ದೇಹದಿಂದ ತೆಗೆದದ್ದು. ಆತನ ದೇಹದಲ್ಲಿ 200 ಕ್ಕೂ ಹೆಚ್ಚು ಪೆಲೆಟ್ ಚೂರುಗಳಿವೆ ಮತ್ತು ಕಣ್ಣಿನಲ್ಲಿ ಮೂರು ಚೂರುಗಳು ಸಿಲುಕಿಕೊಂಡಿವೆ ಎಂದು ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜು ಮತ್ತು ಏಮ್ಸ್ ನೀಡಿರುವ ವೈದ್ಯಕೀಯ ವರದಿಗಳನ್ನು ಪ್ರದರ್ಶಿಸಿದ್ದರು.
ಪೊಲೀಸರು ಗುಂಡು ಹಾರಿಸಿಲ್ಲ ಎಂದಾದರೆ, ಬೇರೆ ಯಾರೋ ಹಾರಿಸಿರಬೇಕು. ಇಲ್ಲಿ ಅಪರಾಧ ನಡೆದಿರುವುದು ಸ್ಪಷ್ಟ. ನಾವು ಎಫ್‌ಐಆರ್ ದಾಖಲಿಸಿ ಈ ಕುಟುಂಬಕ್ಕೆ ನ್ಯಾಯ ನೀಡಬೇಕೆಂದು ಕೇಳುತ್ತಿದ್ದೇವೆ ಎಂದು ಅವರು ಹೇಳಿದ್ದರು.

