ನವದೆಹಲಿ: 2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಪಿಎ ಕಾಯ್ದೆಯಡಿ(UAPA Act) ಬಂಧನಕ್ಕೊಳಗಾಗಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್‌ಗೆ(Umar Khalid) ದೆಹಲಿ ಹೈಕೋರ್ಟ್ (Delhi High Court) ಮೂರು ದಿನಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ತಾಯಿಯ ಶಸ್ತ್ರಚಿಕಿತ್ಸೆ, ಅವರ ಆರೈಕೆ ಹಾಗೂ ಇತ್ತೀಚೆಗೆ ನಿಧನರಾದ ತಮ್ಮ ಚಿಕ್ಕಪ್ಪನ ‘ಚೆಹಲ್ಲಮ್’ (ಮರಣೋತ್ತರ 40ನೇ ದಿನದ ವಿಧಿವಿಧಾನ) ಆಚರಣೆಯಲ್ಲಿ ಭಾಗವಹಿಸಲು ಉಮರ್ ಖಾಲಿದ್ 15 ದಿನಗಳ ಮಧ್ಯಂತರ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ಜೂನ್ 1 ರಿಂದ ಜೂನ್ 3 ರವರೆಗೆ ಕೇವಲ 3 ದಿನಗಳ ಕಾಲ ಸೀಮಿತ ಅವಧಿಯ ಜಾಮೀನು (Interim Bail) ನೀಡಿದೆ.
ಜಾಮೀನು ಅವಧಿಯಲ್ಲಿ ದುರುಪಯೋಗ ತಡೆಯಲು ನ್ಯಾಯಾಲಯವು ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಿದೆ. ಖಾಲಿದ್ ಕಡ್ಡಾಯವಾಗಿ ದೆಹಲಿ-ಎನ್‌ಸಿಆರ್ (National Capital Region) ಪ್ರದೇಶದ ವ್ಯಾಪ್ತಿಯಲ್ಲೇ ಇರಬೇಕು. ಇದನ್ನೂ ಓದಿ: ತ್ವಿಶಾ ಶರ್ಮಾ ಆತ್ಮಹತ್ಯೆ ಕೇಸ್: 10 ದಿನಗಳ ಬಳಿಕ ಕೊನೆಗೂ ಪೊಲೀಸ್ ವಶಕ್ಕೆ ಪತಿ
ಜಾಮೀನಿನ ಅವಧಿಯಲ್ಲಿ ಅವರು ಕೇವಲ ಒಂದು ಮೊಬೈಲ್ ಫೋನ್ ಸಂಖ್ಯೆಯನ್ನು ಮಾತ್ರ ಬಳಸಬೇಕು ಮತ್ತು ಅದು ಸದಾ ಚಾಲ್ತಿಯಲ್ಲಿರಬೇಕು. ಈ ಜಾಮೀನು ಅತ್ಯಂತ ಸೀಮಿತ ಸ್ವರೂಪದ್ದಾಗಿದ್ದು, ನ್ಯಾಯಾಲಯ ವಿಧಿಸಿರುವ ಪ್ರತಿಯೊಂದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

