ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವ ಕನಸನ್ನು ಕೊನೆಗೂ ನನಸು ಮಾಡಿಕೊಂಡಿದ್ದಾರೆ ನಟಿ ದೀಪಿಕಾ ದಾಸ್ (Deepika Das). ಇಂಥದ್ದೊಂದು ಅವಕಾಶ ಸಿಕ್ಕಿದ್ದಕ್ಕೆ ಮನೆಯ ಅಷ್ಟೂ ಸದಸ್ಯರಿಗೆ ಅವರು ಧನ್ಯವಾದ ಹೇಳಿದ್ದಾರೆ. ನಾನು ಕ್ಯಾಪ್ಟನ್ ಆಗುತ್ತೇನೆ ಎಂದು ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ, ಕ್ಯಾಪ್ಟನ್ (Captain) ಆಗಬೇಕು ಎನ್ನುವ ಹಠ ನನ್ನಲ್ಲಿತ್ತು ಎಂದು ಅವರು ಹೇಳಿದ್ದಾರೆ.
ಇತ್ತ ಮಗಳು ಬಿಗ್ ಬಾಸ್ ಮನೆಯಲ್ಲಿ ಮೂರನೇ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಿದ್ದಂತೆಯೇ ದೀಪಿಕಾ ದಾಸ್ ತಾಯಿಯು ಮಗಳಿಗೆ ವಾಯ್ಸ್ ನೋಟ್ಸ್ ಕಳುಹಿಸಿ ಅಭಿನಂದಿಸಿದ್ದಾರೆ. ‘ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ನೀನು ಕ್ಯಾಪ್ಟನ್ ಆಗಿದ್ದಕ್ಕೆ ಎಲ್ಲರಿಗೂ ಖುಷಿಯಾಗಿದೆ. ಆರಾಮಾಗಿ ಆಟವಾಡು. ಎಲ್ಲರೊಂದಿಗೆ ಹೊಂದಿಕೊಂಡಿರು. ಜಾಸ್ತಿ ಮಾತಾಡು, ಜಾಸ್ತಿ ಆಡು’ ಎಂದು ಮಗಳಿಗೆ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದಾರೆ.
ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 7ರಲ್ಲಿಯೂ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದರು. 16 ವಾರಗಳ ಕಾಲ ಅವರು ಮನೆಯಲ್ಲಿದ್ದರು. ಆದರೆ, ಒಂದು ಬಾರಿಯೂ ಅವರಿಗೆ ಕ್ಯಾಪ್ಟನ್ ಆಗುವಂತಹ ಅವಕಾಶ ಸಿಕ್ಕಿರಲಿಲ್ಲ. ಸೀಸನ್ 9ಕ್ಕೂ (Bigg Boss Season 9) ಅವರು ಮರು ಆಯ್ಕೆಯಾಗಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಮೂರನೇ ವಾರಕ್ಕೆ ಅವರು ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾರೆ. ಸೀಸನ್ 9ರಲ್ಲಿ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಹೆಮ್ಮೆ ಅವರದ್ದು.
ಕ್ಯಾಪ್ಟೆನ್ಸಿ ಆಯ್ಕೆಯಾಗಿ ಹಲವು ಟಾಸ್ಕ್ ಗಳನ್ನು ಸ್ಪರ್ಧಿಗಳು ಆಡಬೇಕಿತ್ತು. ಕ್ಯಾಪ್ಟೆನ್ಸಿಗಾಗಿಯೇ ಟಾಸ್ಕ್ ಗಳು ಸಿದ್ಧವಾಗಿದ್ದವು. ಗೋಲ್ಡ್ ಮೈನ್ ಟಾಸ್ಕ್ ನಲ್ಲಿ ಔಟ್ ಆಗಿದ್ದ ದೀಪಿಕಾ ದಾಸ್ ನಂತರ ನಾಲಿಗೆ ನುಲಿ ಚಟುವಟಿಕೆಯಲ್ಲಿ ಗೆಲುವು ಸಾಧಿಸಿ ಮತ್ತೆ ಆಟಕ್ಕೆ ಹಿಂದಿರುಗಿದರು. ಆಕೃತಿ ಹುಡುಕಾಟದಲ್ಲಿ ದೀಪಿಕಾ ದಾಸ್ ಗೆಲ್ಲುವ ಮೂಲಕ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಈ ಪಟ್ಟಕ್ಕಾಗಿ ಅನುಪಮಾ ಗೌಡ (Anupama Gowda) ಹಾಗೂ ರೂಪೇಶ್ ಶೆಟ್ಟಿ (Rupesh Shetty) ಕೂಡ ರೇಸ್ ನಲ್ಲಿದ್ದರು.