ಮುಂಬೈ: 5 ಬಾರಿ ಚಾಂಪಿಯನ್ ಪಟ್ಟ ಗೆದ್ದು ಮೆರೆದಾಡಿದ ಮುಂಬೈ ಇಂಡಿಯನ್ಸ್ ತಂಡ ಹೀನಾಯ ಪ್ರದರ್ಶನದೊಂದಿಗೆ 19ನೇ ಆವೃತ್ತಿಯ ಐಪಿಎಲ್ ಅಭಿಯಾನ ಮುಗಿಸಿದೆ. ಕಳೆದ ಮೂರು ಆವೃತ್ತಿಗಳಿಂದಲೂ ನಿರಾಸೆ ಅನುಭವಿಸಿದ ಮುಂಬೈ 2027 ರ ಐಪಿಎಲ್ ಆವೃತ್ತಿಗೂ ಮುನ್ನವೇ ನಾಯಕತ್ವ ಬದಲಾಯಿಸುವ ನಿರ್ಧಾರಕ್ಕೆ ಬಂದಿದೆ. ಅದಕ್ಕೆ ಮುನ್ನವೇ ಪಾಂಡ್ಯ (Hardik Pandya) ಕೂಡ ಫ್ರಾಂಚೈಸಿ ತೊರೆಯುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗ್ತಿದೆ.
ಮುಂದಿನ ಆವೃತ್ತಿಗೆ ಬಲಿಷ್ಠ ತಂಡ ಕಟ್ಟಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟು ನೂತನ ನಾಯಕನಿಗಾಗಿ ಹುಡುಕಾಟ ನಡೆಸಿದೆ. ಈ ನಡುವೆ ಸ್ವತಃ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೊರೆಯಲು ಸಿದ್ಧರಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಈ ಬೆಳವಣಿಗೆ ಮಧ್ಯೆ ಭಾರತದ ಮಾಜಿ ಕ್ರಿಕೆಟರ್ ಸುಬ್ರಮಣಿಯಂ ಭದ್ರಿನಾಥ್ ಮುಂಬೈ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಟ್ರೇಡ್ ಒಪ್ಪಂದದ ಬಗ್ಗೆ ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಭದ್ರಿನಾಥ್ ಹೇಳಿದ್ದೇನು?
2027ರ ಐಪಿಎಲ್ ಋತುವಿಗೂ ಮುನ್ನ ಹಾರ್ದಿಕ್ ಬದಲಿಗೆ ಶಿವಂ ದುಬೆ ಮತ್ತು ಆಯುಷ್ ಮ್ಹಾತ್ರೆ ಅವರನ್ನ ಮುಂಬೈ ಖರೀದಿಸಬೇಕು ಎಂದಿದ್ದಾರೆ.

ನಾನು ಮುಂಬೈ ಆಟಗಾರನಾಗಿದ್ದರೆ ಹಾರ್ದಿಕ್ ಬದಲಿಗೆ ಸಿಎಸ್‌ಕೆಯ ಶಿವಂ ದುಬೆ ಮತ್ತು ಆಯುಷ್ ಮ್ಹಾತ್ರೆ ಅವರನ್ನು ಬದಲಾಯಿಸುತ್ತಿದ್ದೆ. ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ಜೊತೆಗೆ ಹಾರ್ದಿಕ್ ಸೇರಿಕೊಂಡರೆ ಸಿಎಸ್‌ಕೆ ಬ್ರ‍್ಯಾಂಡ್ ಅನ್ನು ಬೇರೆ ಹಂತಕ್ಕೆ ಕೊಂಡೊಯ್ಯುತ್ತಾರೆ. ಸ್ಯಾಮ್ಸನ್ ಅವರನ್ನ ಸಿಎಸ್‌ಕೆ ನಾಯಕರನ್ನಾಗಿ ಮಾಡಬೇಕೆಂಬ ಯಾವುದೇ ನಿಯಮವಿಲ್ಲ. ಬದಲಾಗಿ ಹಾರ್ದಿಕ್ ಪಾಂಡ್ಯವನ್ನು ನಾಯಕರನ್ನಾಗಿ ನೇಮಕ ಮಾಡುತ್ತೇನೆ ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವೊಂದರಲ್ಲಿ ತಿಳಿಸಿದ್ದಾರೆ.

ಹಾರ್ದಿಕ್ ಕಳೆದ ಮೂರು ಆವೃತ್ತಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಸಿಎಸ್‌ಕೆ ತಂಡಕ್ಕೆ ಬಂದರೆ ಚೆನ್ನೈ ಉತ್ತಮ ಪ್ರದರ್ಶನ ನೀಡಬಹುದು. ಜೊತೆಗೆ ಹಾರ್ದಿಕ್ ಪ್ರದರ್ಶನದಲ್ಲಿಯೂ ಕೂಡ ಸುಧಾರಣೆ ಕಾಣಬಹುದು ಎಂದು ಹೇಳಿದ್ದಾರೆ.
2025ರ ಐಪಿಎಲ್ ಋತುವಿನಲ್ಲಿ ಮುಂಬೈ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನ ನೇಮಕ ಮಾಡಿತ್ತು. ರೋಹಿತ್ ಅವರನ್ನು ಕೆಳಗಿಳಿಸಿದ ಕಾರಣ ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಇತ್ತ ಹಾರ್ದಿಕ್ ಗುಜರಾತ್ ತಂಡದಿಂದ ಮುಂಬೈಗೆ ಬಂದ ಬಳಿಕ ಪಾಂಡ್ಯ ಅವರ ಕಳಪೆ ಪ್ರದರ್ಶನ ಅಭಿಮಾನಿಗಳ ಟೀಕೆಗೆ ಕಾರಣವಾಗಿತ್ತು.
