– ಎಸ್‌ಐಆರ್ ಮುಗಿದ ಕೂಡಲೆ ಚುನಾವಣೆ ಮಾಡಲು ಪತ್ರ ಬರೆಯುತ್ತೇವೆ
ಬೆಂಗಳೂರು: ನಾಗೇಂದ್ರ (B Nagendra) ಪಕ್ಷದ ಶಿಸ್ತಿನ ಸಿಪಾಯಿ. ಅವರ ನಾಯಕತ್ವದ ಮೇಲೆ ನಮಗೆ ನಂಬಿಕೆ ಇದೆ. ಸದ್ಯಕ್ಕೆ ರಾಜೀನಾಮೆ ವಿಚಾರ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D K Shivakumar) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿಎಂ, ಸಚಿವರಾದ ಬೈರತಿ ಸುರೇಶ್ ಹಾಗೂ ಯು.ಟಿ. ಖಾದರ್ ಅವರ ಜೊತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಬರ, ನೀರಾವರಿ, ರೈತರ ಸಮಸ್ಯೆ, ಸರ್ಕಾರದ ಗ್ಯಾರಂಟಿ ಯೋಜನೆಗಳು, ಎಸ್‌ಐಆರ್, ಕಸ್ತೂರಿ ರಂಗನ್ ವರದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಶಾಸಕರ ಅಭಿಪ್ರಾಯ ಪಡೆದಿರುವುದಾಗಿ ತಿಳಿಸಿದ್ದಾರೆ.
102 ತಾಲೂಕುಗಳಲ್ಲಿ ತೀವ್ರ ಬರ
ರಾಜ್ಯದ 102 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ಇದೆ. ಕಂದಾಯ ಸಚಿವರು ನೀಡುವ ವರದಿ ಆಧರಿಸಿ ಬರ ಘೋಷಣೆ ಮಾಡಲಾಗುವುದು. ಬಳಿಕ ಕೇಂದ್ರ ಸರ್ಕಾರದ ಬಳಿ ತೆರಳಿ ಪರಿಹಾರ ಹಾಗೂ ನೆರವಿಗಾಗಿ ಮನವಿ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ.
ಪ್ರತಿ ಜಿಲ್ಲೆಗೆ ಸಚಿವರು ಭೇಟಿ
ಪ್ರಜಾಸೇವೆ’ ಹೆಸರಿನಲ್ಲಿ ಹೊಸ ಇಲಾಖೆ ಆರಂಭಿಸುವ ಚಿಂತನೆ ಇದೆ. ಪ್ರತಿ ತಿಂಗಳ ಮೊದಲ ಶನಿವಾರ ಇಬ್ಬರು ಸಚಿವರು ಪ್ರತಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಲಿದ್ದಾರೆ. ಬಳಿಕ ಶಾಸಕರು ಪಂಚಾಯಿತಿ ಮಟ್ಟಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಕೇಳಬೇಕು ಎಂದು ಸೂಚಿಸಲಾಗಿದೆ. ಸಚಿವರು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲೂ ಜನರನ್ನು ಭೇಟಿ ಮಾಡಬೇಕು ಎಂದರು. ಇದನ್ನೂ ಓದಿ: ಪೂಂಚ್‌ನಲ್ಲಿ ಕಂದಕಕ್ಕೆ ಉರುಳಿದ ಕಾರು – 6 ಮಂದಿ ಸಾವು, ಮೂವರಿಗೆ ಗಾಯ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಒಂದು ಕೋಟಿಗೂ ಹೆಚ್ಚು ಜನರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿರುವ ಬಗ್ಗೆ ಗಮನ ಹರಿಸಲಾಗಿದೆ. ಜಾತಿ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಲು ಸರ್ಕಾರ ನೆರವಾಗಲಿದೆ. ಪ್ರತಿ ಬೂತ್‌ನಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಅಂತಿಮಗೊಳಿಸುವಂತೆ ಸೂಚಿಸಲಾಗಿದೆ. 45 ಲಕ್ಷಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.
ಯುವಕರನ್ನು ಡ್ರಗ್ಸ್‌ನಿಂದ ದೂರವಿಟ್ಟು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳತ್ತ ಕರೆದೊಯ್ಯಲು ‘ನೋ ಟು ಡ್ರಗ್ಸ್, ಎಸ್ ಟು ಸ್ಪೋರ್ಟ್ಸ್’ ಕಾರ್ಯಕ್ರಮ ನಡೆಸಲಾಗುವುದು. 16ರಿಂದ 35 ವರ್ಷದೊಳಗಿನ ಯುವಕರನ್ನು ಒಳಗೊಂಡ ಭಾರತ್ ಜೋಡೋ ಯುವ ಸಂಘಗಳನ್ನು ಪಂಚಾಯಿತಿ ಮಟ್ಟದಲ್ಲಿ ರಚಿಸಲಾಗುವುದು ಎಂದರು.
ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯಲ್ಲಿ ಕಠಿಣ ನಿರ್ಬಂಧಗಳಿವೆ. ಕರ್ನಾಟಕದ ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮವನ್ನು ಸರ್ಕಾರ ಒಪ್ಪುವುದಿಲ್ಲ. ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿರೋಧ ನಿರ್ಣಯ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ವಿಶೇಷ ಅಧಿವೇಶನ ನಡೆಸುವ ಬಗ್ಗೆಯೂ ತೀರ್ಮಾನಿಸಲಾಗುವುದು ಎಂದು ಸಿಎಂ ಹೇಳಿದರು.ಇದನ್ನೂ ಓದಿ: ಗಂಗೊಳ್ಳಿಯಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿದ ಪರ್ಸಿನ್ ಬೋಟ್; ಮೀನುಗಾರರ ರಕ್ಷಣೆ
ಬೆಂಗಳೂರಿನಲ್ಲಿ ಲಾಲ್‌ಬಾಗ್ ಮಾದರಿಯಲ್ಲಿ 6 ಹೊಸ ಪಾರ್ಕ್‌ಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ತುರಹಳ್ಳಿ ಫಾರೆಸ್ಟ್ ಸೇರಿದಂತೆ ಒಟ್ಟು 5 ಸಾವಿರ ಎಕರೆ ಪ್ರದೇಶದಲ್ಲಿ ಪಾರ್ಕ್‌ಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ನಗರದಲ್ಲಿ ಅಂತರ್ಜಲ ಹೆಚ್ಚಿಸಲು ಕೆಲವು ಕೆರೆಗಳನ್ನು ಗುರುತಿಸಿ, ಒತ್ತುವರಿ ತಡೆಯುವ ಹಾಗೂ ಕೆರೆಗಳ ಆಳ ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುವುದು. ಪಾರ್ಕ್‌ಗಳ ಜಾಗವನ್ನು ಯಾವುದೇ ಖಾಸಗಿ ಬಳಕೆಗೆ ನೀಡುವುದಿಲ್ಲ. ಪಾರ್ಕ್‌ಗಳಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ರಸ್ತೆ ಅಗಲೀಕರಣದಂತಹ ಅಗತ್ಯ ಕಾಮಗಾರಿಗಳನ್ನು ಮಾತ್ರ ಕಾನೂನಿನ ಚೌಕಟ್ಟಿನಲ್ಲಿ ಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
