ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟ್ ಅಲೆಗಳ ಹೊಡೆತಕ್ಕೆ ಸಿಲುಕಿ ಬಿರುಕು ಕಾಣಿಸಿಕೊಂಡ ಘಟನೆ ಗಂಗೊಳ್ಳಿ ಸಮೀಪ ನಡೆದಿದೆ.
ಗಂಗೊಳ್ಳಿಯಿಂದ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ಘಟನೆ ನಡೆದಿದ್ದು, ಬೋಟ್‌ನಲ್ಲಿ 30 ಮಂದಿ ಮೀನುಗಾರರು ಇದ್ದರು. ಬೋಟ್‌ನಲ್ಲಿ ಬಿರುಕು ಕಾಣಿಸಿಕೊಂಡ ಬೆನ್ನಲ್ಲೇ ನೀರು ಒಳನುಗ್ಗಿ ಮುಳುಗಲು ಆರಂಭಿಸಿತ್ತು.
ವಿಷಯ ತಿಳಿಯುತ್ತಿದ್ದಂತೆ ಕರಾವಳಿ ಕಾವಲು ಪಡೆ ತಕ್ಷಣ ಕಾರ್ಯಾಚರಣೆ ನಡೆಸಿತು. ಕರಾವಳಿ ಮೀಸಲು ಪಡೆಯ ಇನ್ಸ್‌ಪೆಕ್ಟರ್ ರಮೇಶ್ ಕೆ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸ್ಥಳೀಯರ ನೆರವಿನೊಂದಿಗೆ ಗಂಗೊಳ್ಳಿ ಕರಾವಳಿ ಕಾವಲು ಪಡೆ 30 ಮೀನುಗಾರರನ್ನು ರಕ್ಷಿಸಿದೆ.
