ಉಡುಪಿ: ಜಿಲ್ಲೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಅಡುಗೆ ಅನಿಲ ಪೂರೈಕೆ ಸಮಸ್ಯೆ ತೀವ್ರಗೊಂಡಿದೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಎರಡು ತಿಂಗಳಿನಿಂದ ಸಮರ್ಪಕ ಗ್ಯಾಸ್ ಪೂರೈಕೆ ಆಗುತ್ತಿಲ್ಲ ಎಂದು ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಅಸೋಸಿಯೇಷನ್ ಸದಸ್ಯರು ಸಭೆ ನಡೆಸಿ ಜಿಲ್ಲಾಡಳಿತದ ಗಮನ ಸೆಳೆಯಲು ಮುಂದಾಗಿದ್ದಾರೆ.

ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಉಡುಪಿಯ ಶಾರದಾ ಹೋಟೆಲ್‌ನಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸದಸ್ಯರು, ಕಳೆದ ಎರಡು ತಿಂಗಳಿನಿಂದ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಸಮರ್ಪಕವಾಗಿ ಅಡುಗೆ ಅನಿಲ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿದರು. ಕೇಟರಿಂಗ್ ಹಾಗೂ ಕಾಳಸಂತೆಯಲ್ಲಿ ಗ್ಯಾಸ್ ಸುಲಭವಾಗಿ ಲಭ್ಯವಿದ್ದರೂ, ಸರ್ಕಾರಕ್ಕೆ ಜಿಎಸ್‌ಟಿ ಮತ್ತು ಅಬಕಾರಿ ತೆರಿಗೆ ಪಾವತಿಸುವ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಮಾತ್ರ ಗ್ಯಾಸ್ ಸಿಗುತ್ತಿಲ್ಲ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಮಧ್ಯಪ್ರಾಚ್ಯ ಯುದ್ಧದ ನೆಪವಿಟ್ಟು ಗ್ಯಾಸ್ ಪೂರೈಕೆ ಕಡಿತ ಮಾಡಲಾಗಿದೆ ಎಂದು ಆರೋಪಿಸಿದ ಸದಸ್ಯರು, ಗ್ಯಾಸ್ ವಿತರಕ ಏಜೆನ್ಸಿಗಳ ಮೇಲೆ ಸಮಗ್ರ ಆಡಿಟ್ ನಡೆಸುವಂತೆ ಒತ್ತಾಯಿಸಿದರು. ಪ್ರತಿ ತಿಂಗಳು 30ರಿಂದ 40 ಸಾವಿರ ರೂಪಾಯಿವರೆಗೆ ಜಿಎಸ್‌ಟಿ ಪಾವತಿಸುತ್ತಿದ್ದರೂ, ಮೂಲಭೂತ ಅಗತ್ಯವಾದ ಅಡುಗೆ ಅನಿಲಕ್ಕಾಗಿ ಸಂಕಷ್ಟ ಎದುರಿಸುವಂತಾಗಿದೆ ಎಂದು ವ್ಯಾಪಾರಿಗಳು ದೂರಿದರು. ಬಾರ್ ಹಾಗೂ ವೆಜ್ ರೆಸ್ಟೋರೆಂಟ್‌ಗಳಿಗೆ ಆದ್ಯತೆ ಮೇರೆಗೆ ಗ್ಯಾಸ್ ಪೂರೈಸಬೇಕು. ಇಲ್ಲವಾದಲ್ಲಿ ವ್ಯವಹಾರ ನಿರ್ವಹಣೆ ಕಷ್ಟವಾಗಲಿದೆ ಎಂದು ಎಚ್ಚರಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಅಸೋಸಿಯೇಶನ್ ಸದಸ್ಯರು ಎಚ್ಚರಿಕೆ ನೀಡಿದರು.

