ಬೆಂಗಳೂರು: ಕಾಂಗ್ರೆಸ್ ಲೆಟರ್‌ಹೆಡ್‌ನಲ್ಲಿ ಸ್ಪೀಕರ್, ಡೆಪ್ಯುಟಿ ಸ್ಪೀಕರ್, ಸಭಾಪತಿ, ಉಪಸಭಾಪತಿ ಹುದ್ದೆಗಳಿಗೆ ಹೆಸರು ಆಯ್ಕೆ ಮಾಡಿ ಪ್ರಕಟಿಸಿರುವ ವಿಚಾರಕ್ಕೆ ಬಿಜೆಪಿ ಶಾಸಕ ಸುರೇಶ್ ಕುಮಾರ್ (Suresh Kumar) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕೆಟ್ಟ ಸಂಪ್ರದಾಯಕ್ಕೆ ಕಾಂಗ್ರೆಸ್ ಪಕ್ಷ ನಾಂದಿ ಹಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರು, ಮಾನ್ಯ ಉಪಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳು ಮತ್ತು ಉಪಸಭಾಪತಿ ಹುದ್ದೆಗಳು ಯಾವುದೇ ರಾಜಕೀಯ ಪಕ್ಷದ ವ್ಯಾಪ್ತಿಗೆ ಸೀಮಿತವಾಗದ, ಅತ್ಯುನ್ನತ ಸಾಂವಿಧಾನಿಕ ಸ್ಥಾನಗಳಾಗಿವೆ. ಈ ಹುದ್ದೆಗಳು ತಮ್ಮದೇ ಆದ ಘನತೆ, ಗೌರವ, ನಿಷ್ಪಕ್ಷಪಾತತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿನಿಧಿಸುವ ಪರಂಪರೆಯನ್ನು ಹೊಂದಿವೆ. ಆದರೆ, ಕಾಂಗ್ರೆಸ್ ತನ್ನ ಅಧಿಕೃತ ಪಕ್ಷದ ಪತ್ರ ಶೀರ್ಷಿಕೆಯಲ್ಲಿ (ಲೆಟರ್‌ಹೆಡ್) ಈ ಸಾಂವಿಧಾನಿಕ ಹುದ್ದೆಗಳ ಹೆಸರನ್ನು ಬಳಸಿರುವುದು ಅತ್ಯಂತ ಆಕ್ಷೇಪಾರ್ಹ. ಇಂತಹ ನಡೆ ಈ ಹುದ್ದೆಗಳ ಪಕ್ಷಾತೀತ ಸ್ವರೂಪಕ್ಕೆ ಧಕ್ಕೆ ತರುವುದಲ್ಲದೆ, ಅವುಗಳ ಘನತೆ ಮತ್ತು ಗೌರವಕ್ಕೂ ಕಳಂಕ ತರುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಏಕೈಕ ಉಪ್ಪಾರ ಶಾಸಕನಿಗೆ ಒಲಿದ ಮಂತ್ರಿಗಿರಿ; 2ನೇ ಬಾರಿಗೆ ಪುಟ್ಟರಂಗಶೆಟ್ಟಿ ಸಚಿವ
ನನಗೆ ಗೊತ್ತಿರುವಂತೆ ಮುಂದೆ ಆಯ್ಕೆಯಾಗಬೇಕಿರುವ ಸಭಾಧ್ಯಕ್ಷರ, ಉಪಸಭಾಧ್ಯಕ್ಷರ, ಸಭಾಪತಿಗಳ ಹಾಗೂ ಉಪ ಸಭಾಪತಿಗಳ ಹೆಸರುಗಳನ್ನು ಆಳುವ ಪಕ್ಷದ ಲೆಟರ್‌ಹೆಡ್‌ನಲ್ಲಿ ದೆಹಲಿಯಿಂದಲೇ ಕಳುಹಿಸುತ್ತಿರುವುದು ಇದೇ ಮೊದಲ ಬಾರಿ. ಇದು ಕೇವಲ ಸಂಸದೀಯ ಸಂಪ್ರದಾಯಗಳ ಉಲ್ಲಂಘನೆಯಷ್ಟೇ ಅಲ್ಲ, ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳ ಮೇಲಿನ ನಿರ್ಲಕ್ಷ್ಯದ ಪ್ರತೀಕವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬಾಯಲ್ಲಿ ಸಂವಿಧಾನದ ರಕ್ಷಣೆ ಎಂದು ಹೇಳಿಕೊಂಡು, ಆಚರಣೆಯಲ್ಲಿ ಸಾಂವಿಧಾನಿಕ ಸಂಸ್ಥೆಗಳು ಮತ್ತು ಉನ್ನತ ಹುದ್ದೆಗಳನ್ನು ಪಕ್ಷದ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವ ಕಾಂಗ್ರೆಸ್‌ನ ದ್ವಂದ್ವ ನೀತಿ ಮತ್ತೊಮ್ಮೆ ಬಹಿರಂಗವಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಂದೆ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಮಂತ್ರಿಸ್ಥಾನ ಕೈತಪ್ಪಿತ್ತು, ಆಮೇಲೆ ನಾನು ಸಚಿವನಾಗಿಲ್ವಾ? – ಸಿಎಂ
