ಉಡುಪಿ: ಗ್ಯಾರಂಟಿ ಯೋಜನೆಗಳನ್ನು (Guarantee Schemes) ವಿರೋಧಿಸುವ ಬಿಜೆಪಿ ನಾಯಕರು, ಅದೇ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಧರ್ಮ ಮತ್ತು ದೇವರ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯಿಂದ ಸಂವಿಧಾನಕ್ಕೆ ಅಪಾಯ ಎದುರಾಗಿದೆ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದರು.
ಕಾರ್ಕಳ (Karkala) ಕಚೇರಿ ಪ್ರಜಾಸೌಧದ ಬಳಿ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಕಾರ್ಕಳ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಮಹತ್ವದ ಕೊಡುಗೆ ನೀಡಿದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದೆ. ಮತಗಳ್ಳತನ ಮತ್ತು ಎಸ್‌ಐಆರ್ ಸೇರಿದಂತೆ ವಿವಿಧ ವಿಚಾರಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ರಾಮನ ಹೆಸರಿನಲ್ಲಿ ಹಣ ಲೂಟಿ ಮಾಡಿದವರು ಬಿಜೆಪಿಗರು. ಸಂವಿಧಾನವನ್ನು ಬದಲಾಯಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಧರ್ಮ ಮತ್ತು ದೇವರ ಹೆಸರಿನಲ್ಲಿ ಮತ ಕೇಳುವ ಬಿಜೆಪಿ, ದೇಶದ ನಾಗರಿಕರ ಪೌರತ್ವವನ್ನೇ ಪ್ರಶ್ನಿಸುವ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ: ಅಡುಗೆ ಎಣ್ಣೆ ಮರುಬಳಕೆ ವಿರುದ್ಧ ಶೀಘ್ರ ಕ್ರಮ: ಯು.ಟಿ.ಖಾದರ್
ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೋಳ್ಳಿ ಮಾತನಾಡಿ, ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಬಿಜೆಪಿಯವರೂ ಪಡೆಯುತ್ತಿದ್ದಾರೆ. ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿಸುವ ವಿಚಾರದಲ್ಲಿ ಕಾಂಗ್ರೆಸ್ ಆದ್ಯತೆ ನೀಡಿದೆ. ಅಂಗನವಾಡಿ ಸಹಾಯಕಿಯರ ಗೌರವಧನ ಹೆಚ್ಚಳ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಅವಕಾಶ ನೀಡದೆ ಬಿಜೆಪಿ ಅವಮಾನ ಮಾಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮಾತನಾಡಿ, ಟೆಂಪಲ್ ಟೂರಿಸಂ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಸರ್ಕಾರ ಕೊಡುಗೆ ನೀಡಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ಭದ್ರತೆ ಒದಗಿಸಲಾಗುತ್ತಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರದ ನೀತಿಗಳಿಂದ ಬೆಲೆ ಏರಿಕೆಯಾಗಿದೆ ಎಂದು ಟೀಕಿಸಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಜನಧನ್ ಖಾತೆಗಳಿಗೆ ಕಪ್ಪುಹಣದ ಪಾಲು ಜಮೆಯಾಗಲಿದೆ ಎಂಬ ನಿರೀಕ್ಷೆ ಈಡೇರಿಲ್ಲ. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಬಿಜೆಪಿಯವರೇ ಯುವನಿಧಿ, ಭಾಗ್ಯಲಕ್ಷ್ಮೀ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಮಾತನಾಡಿ, ರಾಜ್ಯ ಸರ್ಕಾರವನ್ನು ‘ಜೀರೋ ಬ್ಯಾಲೆನ್ಸ್ ಸರ್ಕಾರ’ ಎಂದು ಟೀಕಿಸುವ ಬಿಜೆಪಿ ನಾಯಕರಿಗೆ ಜ್ಞಾನವೇ ಶೂನ್ಯವಾಗಿದೆ ಎಂದು ವ್ಯಂಗ್ಯವಾಡಿದರು. ಎಸ್‌ಐಆರ್ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆಗಳನ್ನು ಎದುರಿಸುವಂತಾಗಿದೆ. ಕಾರ್ಕಳ ಶಾಸಕರ ತಪ್ಪುಗಳ ಪರಿಣಾಮವನ್ನು ಇತರ ಬಿಜೆಪಿ ಶಾಸಕರೂ ಅನುಭವಿಸಬೇಕಾಗುತ್ತದೆಯೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಾರಕಿಹೊಳಿ ಕೇಸ್‌ನಲ್ಲಿ ಸ್ಟಿಂಗ್ ಮಾಡಿಸಿದವರು ಯಾರು ಅನ್ನೋದು ಜನಕ್ಕೆ ಗೊತ್ತಿದೆ: ವಿಜಯೇಂದ್ರ ತಿರುಗೇಟು
ಕಾರ್ಕಳ ಶಾಸಕರು ರಾಜ್ಯದ ಅತಿ ಶ್ರೀಮಂತ ಶಾಸಕರಾಗಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯ ಆರೋಪಗಳನ್ನು ಒಪ್ಪಲು ಸಾಧ್ಯವಿಲ್ಲ. ಗ್ಯಾರಂಟಿ ಯೋಜನೆಗಳ ಮೂಲಕ ಸುಮಾರು 600 ಕೋಟಿ ರೂ. ಹಣವನ್ನು ಜನರಿಗೆ ತಲುಪಿಸಲಾಗಿದೆ. ಕಾರ್ಕಳದ ಮಹಾಮಸ್ತಕಾಭಿಷೇಕಕ್ಕೂ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ. ಶಾಸಕರು ಗುದ್ದಲಿಪೂಜೆ ನೆರವೇರಿಸುವ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸುತ್ತಿರುವುದು ರಾಜ್ಯ ಸರ್ಕಾರವೇ ಅಲ್ಲವೇ ಎಂದು ಕೇಳಿದರು.
ಅಕ್ರಮ-ಸಕ್ರಮ ಪ್ರಕ್ರಿಯೆ ರದ್ದಾಗಿರುವುದಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ. ವಿದ್ಯುತ್ ಬೆಲೆ ಏರಿಕೆಯ ವಿಚಾರದಲ್ಲಿಯೂ ಶಾಸಕ ವಿ.ಸುನಿಲ್ ಕುಮಾರ್ ಅವರ ಪಾತ್ರವಿದೆ. ಕೇಂದ್ರ ಸರ್ಕಾರದಿಂದ ವಿವಿಧ ಹಣಕಾಸು ಯೋಜನೆಗಳಡಿ ರಾಜ್ಯಕ್ಕೆ ಸುಮಾರು 2,600 ಕೋಟಿ ರೂ. ಬಾಕಿ ಬರಬೇಕಿದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧವೂ ವಾಗ್ದಾಳಿ ನಡೆಸಿದ ಶುಭದರಾವ್, ಬಿಲ್ಲವ ಮತ್ತು ಈಡಿಗ ಸಮುದಾಯದ ವಿಚಾರದಲ್ಲಿ ಜಾತಿ ರಾಜಕೀಯ ಮಾಡಲಾಗುತ್ತಿದೆ. ನಾರಾಯಣ ಗುರು ನಿಗಮ ಸ್ಥಾಪಿಸುವ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡಿದೆ. ಬಿಜೆಪಿ ಬಿಲ್ಲವ ಸಮುದಾಯದ ಯುವಕರ ಕೈಗೆ ಕತ್ತಿ, ತಲವಾರು ನೀಡಿದೆ. ಜಾತಿ-ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾರ್ಕಳ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾತನಾಡಿ, 37 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ದೊರೆತಿದೆ. ಶಕ್ತಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಸುಮಾರು 60 ಸಾವಿರ ಕುಟುಂಬಗಳಿಗೆ ಸರ್ಕಾರ ನೆರವು ನೀಡುತ್ತಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆಯಾಗುವ ಮೂಲಕ ಜನರ ಬದುಕಿಗೆ ಆರ್ಥಿಕ ನೆರವು ಸಿಗುತ್ತಿದೆ ಎಂದರು. ವಾಗ್ಮಿ ಲಕ್ಷ್ಮೀಶ್ ಕಮಲಡ್ಕ ಮಾತನಾಡಿ, ಉಡುಪಿ ಜಿಲ್ಲೆಯ ಬಿಜೆಪಿ ಸಂಸದರು ಮತ್ತು ಶಾಸಕರು ಅಧರ್ಮದ ಪಾಲುದಾರರಾಗಿದ್ದಾರೆ ಎಂದು ಟೀಕಿಸಿದರು.
ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಿಲ್ಲವ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಿ ನಾರಾಯಣ ಗುರು ನಿಗಮ ಸ್ಥಾಪಿಸಿದೆ. ಸಮುದಾಯದ ಅಭಿವೃದ್ಧಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು. ಕಸ್ತೂರಿರಂಗನ್ ವರದಿ ಸೇರಿದಂತೆ ಪ್ರಮುಖ ವಿಚಾರಗಳಲ್ಲಿ ಅವರು ಸಮರ್ಪಕವಾಗಿ ಧ್ವನಿ ಎತ್ತಿಲ್ಲ ಎಂದು ಆರೋಪಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಶಂಕರ್ ಶೇರಿಗಾರ್, ಸುಧಾಕರ ಕೋಟ್ಯಾನ್, ರವಿಶಂಕರ್, ಬಿಪಿನ್ ಚಂದ್ರಪಾಲ್, ಶೇಖರ ಮಡಿವಾಳ, ವಿಶ್ವಾಸ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು. ಪ್ರದೀಪ್ ಬೆಲಾಡಿ, ಹರೀಶ್ ಕಿಣಿ ಸೇರಿದಂತೆ ಕಾರ್ಯಕ್ರಮ ನಿರೂಪಿಸಿದರು.

