ಬಾಗಲಕೋಟೆ: ರಮೇಶ್ ಜಾರಕಿಹೊಳಿ(Ramesh Jarkiholi) ಪ್ರಕರಣದಲ್ಲಿ ಯಾರು ಸ್ಟಿಂಗ್ ಆಪರೇಷನ್(Sting Operation) ಮಾಡಿಸಿದರು ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ(BY Vijayendra) ಸಿಎಂ ಡಿಕೆ ಶಿವಕುಮಾರ್(DK Shivakumar) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಚಿವರು ಸ್ಟಿಂಗ್ ಆಪರೇಷನ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ವಿಜಯೇಂದ್ರ, ತಮ್ಮದೇ ಶಾಸಕರ ಮೇಲೆ ಸ್ಟಿಂಗ್ ಮಾಡಿಸ್ತಾರೋ ಅಥವಾ ಡಿಂಗ್ ಆಪರೇಷನ್ ಮಾಡ್ತಾರೋ? ಇವೆಲ್ಲದರ ಹಿಂದಿರುವ ಸೂತ್ರಧಾರಿಗಳು ಯಾರು ಎಂಬುದು ಜನರಿಗೆ ತಿಳಿದಿದೆ. ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಯಾರು ಸ್ಟಿಂಗ್ ಮಾಡ್ತಾರೆ, ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ರಾಜ್ಯದ ಜನರು ಕಣ್ಣಾರೆ ನೋಡಲಿದ್ದಾರೆ ಎಂದು ಹೇಳಿದರು.
ಬಾಗಲಕೋಟೆಯ ಮುಧೋಳ್ ತಳಿ ಸಂಶೋಧನಾ ಕೇಂದ್ರಕ್ಕೆ ಭೇಟಿ
ಬಾಗಲಕೋಟೆ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಇಂದು ತಿಮ್ಮಾಪುರದಲ್ಲಿರುವ ‘ಮುಧೋಳ್ ಶ್ವಾನ ತಳಿ ಸಂಶೋಧನೆ ಮತ್ತು ಮಾಹಿತಿ ಕೇಂದ್ರ’ಕ್ಕೆ ಭೇಟಿ ನೀಡಲಾಯಿತು.
ನಮ್ಮ ಹಿರಿಯ ನಾಯಕರು, ಅಂದಿನ ಮುಖ್ಯಮಂತ್ರಿಗಳಾದ ಶ್ರೀ @BSYBJP ನವರ ಆಡಳಿತಾವಧಿಯಲ್ಲಿ, 2009ರಲ್ಲಿ ಸ್ಥಾಪನೆಯಾದ ಈ ಕೇಂದ್ರ, ನಾಡಿನ ಹೆಮ್ಮೆಯ ದೇಸಿ ತಳಿಯಾದ ಮುಧೋಳ್ ಹೌಂಡ್ನ ಶುದ್ಧ ರಕ್ತರೇಖೆಯನ್ನು ಸಂರಕ್ಷಿಸುವಲ್ಲಿ ಅದ್ಭುತ ಕಾರ್ಯ ಮಾಡುತ್ತಿದೆ. ಕೇಂದ್ರ ಸರ್ಕಾರದ SPG ಪಡೆ ಹಾಗೂ ಭಾರತೀಯ ಸೇನೆ ಸೇರಿ ದೇಶದ ಪ್ರಮುಖ ಭದ್ರತಾ ಪಡೆಗಳಲ್ಲಿ ಕೂಡ ಕಾವಲು ಕಾಯುತ್ತಿರುವ ಈ ಮುಧೋಳ್ ಶ್ವಾನಗಳು ನಾಡಿನ ಹಿರಿಮೆಯಾಗಿದೆ.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಮತ್ತು ಸಂಸದರಾದ ಶ್ರೀ @govind_karjol , ಮಾಜಿ ಶಾಸಕರಾದ ಶ್ರೀ ದೊಡ್ಡನಗೌಡ ಪಾಟೀಲ್, ಜಿಲ್ಲಾಧ್ಯಕ್ಷರಾದ ಶ್ರೀ ಶಾಂತನಗೌಡ ಪಾಟೀಲ್ ಸೇರಿದಂತೆ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
— Vijayendra Yediyurappa (@BYVijayendra) October 8, 2026
2028ಕ್ಕೆ ನಮ್ಮದೇ ಸರ್ಕಾರ ಬರುತ್ತದೆ, ನಾನೇ ಸಿಎಂ ಆಗುತ್ತೇನೆ ಎಂಬ ಡಿಕೆಶಿ ಹೇಳಿಕೆಗೆ, ಡಿಕೆಶಿ ಅವರು ಸಿಎಂ ಆಗುವುದಕ್ಕೆ ನನ್ನದೇನೂ ತಕರಾರಿಲ್ಲ. ಆದರೆ, ಡಿಕೆಶಿ ಅವರೇ, ಮೊದಲು ನಿಮ್ಮ ಈ ಸ್ಟಿಂಗ್ ಆಪರೇಷನ್ ಬದಿಗಿಟ್ಟು ಜನರಿಗೆ ಸರಿಯಾಗಿ ಆಡಳಿತ ಕೊಡುವುದನ್ನು ಕಲಿಯಿರಿ. ಅವರನ್ನು ಸಿಎಂ ಮಾಡಲು ಸಿದ್ದರಾಮಯ್ಯ ಅವರೇ ಬಿಡಬೇಕಲ್ಲ? ಈಗಾಗಲೇ ಹಿರಿಯ ಸಚಿವ ಎಚ್.ಕೆ. ಪಾಟೀಲ್ ಬರೆದ ಪತ್ರ, ರಾಯರೆಡ್ಡಿ ಅವರ ಹೇಳಿಕೆ ಹಾಗೂ ಬಿ.ಆರ್. ಪಾಟೀಲ್ ಅವರ ಮುನಿಸು ನೋಡಿದರೆ ಕಾಂಗ್ರೆಸ್ನ ಹಿರಿಯ ನಾಯಕರೆಲ್ಲರೂ ಆಂತರಿಕ ದಂಗೆ ಏಳುತ್ತಿರುವುದು ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಡಿಕೆಶಿ ಅವರಿಗೆ ನೆಮ್ಮದಿಯಿಂದ ರಿಯಲ್ ಎಸ್ಟೇಟ್ ಮಾಡಲೂ ಸಾಧ್ಯವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು: ಡಿಕೆಶಿ ಬಾಂಬ್
ರಾಜ್ಯ ಸಾರಿಗೆ ಸಂಸ್ಥೆಯ ಸಂಕಷ್ಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕೆಎಸ್ಆರ್ಟಿಸಿಗೆ ಸರ್ಕಾರ ಬರೊಬ್ಬರಿ 6,500 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಹಣ ಬಿಡುಗಡೆ ಮಾಡುವಂತೆ ಕೆಎಸ್ಆರ್ಟಿಸಿ ಎಂಡಿ ಸ್ವತಃ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದಾರೆ. ಇವತ್ತು ಬಸ್ಗಳಿಗೆ ಹಾಕಲು ಡೀಸೆಲ್ ಇಲ್ಲದಂತಾಗಿದೆ, ಲೇಬರ್ ಹಾಗೂ ಕ್ಲೀನರ್ಗಳಿಗೆ ಸರಿಯಾಗಿ ಸಂಬಳ ನೀಡಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರದ ಆರ್ಥಿಕ ದಿವಾಳಿತನವನ್ನು ಎತ್ತಿ ತೋರಿಸಿದರು.
ಎಸ್.ಐ.ಆರ್ (SIR) ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಹುಲ್ ಗಾಂಧಿಗೆ ತಮ್ಮೊಬ್ಬರ ಕೈಯಲ್ಲೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದಿದೆ. ಅದಕ್ಕಾಗಿಯೇ ಎಲ್ಲರನ್ನೂ ಜತೆ ಸೇರಿಸಿಕೊಂಡು ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

