ಮಡಿಕೇರಿ: ಮೈಸೂರು ದಸರಾ (Mysuru Dasara) ಜಂಬೂಸವಾರಿಯ ಚಿನ್ನದ ಅಂಬಾರಿಯನ್ನು ಈ ಬಾರಿ ಯಾವ ಆನೆ ಹೊರುತ್ತದೆ ಎಂಬ ಕುತೂಹಲಕ್ಕೆ ತೆರೆ ಬೀಳುವ ಸಮಯ ಸಮೀಪಿಸುತ್ತಿದೆ.
ಕಳೆದ 6 ವರ್ಷಗಳಿಂದ ಅಂಬಾರಿ ಹೊತ್ತು ಗಜಪಡೆಯನ್ನು ಮುನ್ನಡೆಸಿದ್ದ ಕ್ಯಾಪ್ಟನ್ ಅಭಿಮನ್ಯು ಈ ಬಾರಿ ದಸರಾದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಅಭಿಮನ್ಯುವಿನ (Abhimanyu Elephant) ಸ್ಥಾನವನ್ನು ತುಂಬುವ ಅದೃಷ್ಟ ಯಾರಿಗೆ ಎಂಬ ಕುತೂಹಲ ಮೂಡಿದೆ. ದುಬಾರೆ ಶಿಬಿರದ ಧನಂಜಯ ಅಥವಾ ಪ್ರಶಾಂತ ಅಥವಾ ನಾಗರಹೊಳೆ ಶಿಬಿರದ ಮಹೇಂದ್ರ ಮೂವರ ನಡುವೆ ಅಂಬಾರಿ ಹೊರಲು ಪೈಪೋಟಿ ಶುರುವಾಗಿದೆ.

ಮೈಸೂರು ದಸರಾ ಅಂದ್ರೆ ಜಂಬೂಸವಾರಿ, ಜಂಬೂಸವಾರಿ ಅಂದರೆ ಚಿನ್ನದ ಅಂಬಾರಿ. ಆ ಅಂಬಾರಿಯನ್ನು ಹೊರುವ ಗಜರಾಜನ ಆಯ್ಕೆ ಪ್ರತಿವರ್ಷವೂ ವಿಶೇಷ ಕುತೂಹಲ ಮೂಡಿಸುತ್ತದೆ. ಕಳೆದ 6 ವರ್ಷಗಳಿಂದ ದಸರಾ ಉತ್ಸವದಲ್ಲಿ ಅಂಬಾರಿ ಹೊತ್ತು ಗಜಪಡೆಯನ್ನ ಮುನ್ನಡೆಸಿದ್ದ ಕ್ಯಾಪ್ಟನ್ ಅಭಿಮನ್ಯುವಿಗೆ ಈ ಬಾರಿ ವಿಶ್ರಾಂತಿ ನೀಡಲಾಗಿದೆ.
ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಯ ಹಿನ್ನೆಲೆಯಲ್ಲಿ 60 ವರ್ಷ ಮೇಲ್ಪಟ್ಟ ಆನೆಗಳನ್ನು ಕಠಿಣ ಕೆಲಸಗಳಿಗೆ ಅಥವಾ ಭಾರ ಹೊರುವ ಕಾರ್ಯಗಳಿಗೆ ಬಳಸುವಂತಿಲ್ಲ. 61 ವರ್ಷದ ಅಭಿಮನ್ಯು ಈ ವಯೋಮಿತಿಯನ್ನ ಮೀರಿರುವ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಆನೆಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಇದೀಗ ಚಿನ್ನದ ಅಂಬಾರಿ ಹೊರುವ ಗೌರವಕ್ಕಾಗಿ ದುಬಾರೆ ಸಾಕಾನೆ ಶಿಬಿರದ 46 ವರ್ಷದ ಧನಂಜಯ ಮತ್ತು 54 ವರ್ಷದ ಪ್ರಶಾಂತ ಆನೆಯ ನಡುವೆ ಪೈಪೋಟಿ ಆರಂಭವಾಗಿದೆ.

ಧನಂಜಯ ಈಗಾಗಲೇ ಏಳು ಬಾರಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿರುವ ಅನುಭವ ಹೊಂದಿದ್ದಾನೆ. ಮತ್ತೊಂದೆಡೆ, ಪ್ರಶಾಂತ 16 ಬಾರಿ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಿದ್ದಾನೆ. ಈ ಅನುಭವವೇ ಇಬ್ಬರನ್ನೂ ಅಂಬಾರಿ ಹೊರುವ ಪ್ರಮುಖ ಸ್ಪರ್ಧಿಗಳನ್ನಾಗಿ ಮಾಡಿದೆ. ಈ ಮಧ್ಯೆ ನಾಗರಹೊಳೆ ಶಿಬಿರದ 42 ವರ್ಷದ ಮಹೇಂದ್ರ ಆನೆಯ ಹೆಸರೂ ಅಂಬಾರಿ ಆನೆಯ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಹೀಗಾಗಿ ಅಂತಿಮ ಆಯ್ಕೆ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಿದೆ.
ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆ ವೇಳೆ ಮೂರು ಆನೆಗಳ ಆರೋಗ್ಯ, ದೈಹಿಕ ಸಾಮರ್ಥ್ಯ, ತರಬೇತಿ, ಶಿಸ್ತು ಸೇರಿದಂತೆ ಹಲವು ಮಾನದಂಡಗಳನ್ನ ಪರಿಗಣಿಸಲಾಗುತ್ತದೆ. ಈ ಎಲ್ಲಾ ಅಂಶಗಳನ್ನ ಪರಿಶೀಲಿಸಿದ ಬಳಿಕ ಅಂತಿಮ ಆಯ್ಕೆ ನಡೆಯಲಿದೆ. ಈ ಬಾರಿಯ ದಸರಾದಲ್ಲಿ ಯಾವ ಆನೆ ಚಿನ್ನದ ಅಂಬಾರಿ ಹೊತ್ತು ಗಜಪಡೆಯನ್ನ ಮುನ್ನಡೆಸಲಿದೆ ಎಂಬುದನ್ನ ಅರಣ್ಯ ಇಲಾಖೆ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.

ಈ ಬಗ್ಗೆ ʻಪಬ್ಲಿಕ್ ಟಿವಿʼಯೊಂದಿಗೆ ಮಾತನಾಡಿದ ಧನಂಜಯ ಆನೆಯ ಮಾವುತ ಭಾಸ್ಕರ್, ʻಪ್ರತಿ ವರ್ಷವೂ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಾ ಬಂದಿದ್ದೇವೆ. ಈ ಬಾರಿಯೂ ನಮ್ಮ ಆನೆ ಆಯ್ಕೆಯಾಗಿರುವುದು ತುಂಬಾ ಸಂತಸದ ವಿಷಯ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಮಡಿಕೇರಿಯಿಂದ ಮೈಸೂರಿಗೆ ತೆರಳುವ ಅವಕಾಶ ಸಿಕ್ಕಿದೆ. ಈ ಬಾರಿ ಅಂಬಾರಿ ಹೊರುವ ಆನೆಗಳ ಆಯ್ಕೆಯಲ್ಲಿ ಧನಂಜಯ, ಪ್ರಶಾಂತ್ ಹಾಗೂ ಮಹೇಂದ್ರ ಅವರ ಹೆಸರು ಕೇಳಿಬರುತ್ತಿದೆ. ಅಭಿಮನ್ಯು ನಿವೃತ್ತಿಯಾದ ಬಳಿಕ ಈ ಮೂರು ಆನೆಗಳಲ್ಲಿ ಒಂದಕ್ಕೆ ಅಂಬಾರಿ ಹೊರುವ ಅವಕಾಶ ದೊರೆಯಲಿದೆ. ಅಂತಿಮ ನಿರ್ಧಾರ ದೇವರ ಇಚ್ಛೆಯಂತೆ ಆಗುತ್ತದೆ ಎಂಬ ನಂಬಿಕೆ ಇದೆ. ನಮ್ಮ ಮಡಿಕೇರಿಯ ಆನೆಗೆ ಅಂಬಾರಿ ಹೊರುವ ಅವಕಾಶ ಸಿಗಲಿ ಎಂಬುದು ನಮ್ಮ ಆಸೆ. ಇದರಿಂದ ನಮಗೆ ತುಂಬಾ ಸಂತೋಷವಾಗಿದೆʼ ಎಂದು ತಿಳಿಸಿದ್ದಾರೆ.

