– ಮನೆಯವರ ಸಾವಿನ ನ್ಯಾಯದ ಬಗ್ಗೆ ಬಿಜೆಪಿಯವರೂ ಮಾತಾಡ್ತಿಲ್ಲ ಅಂತ ಬೇಸರ
ಶಿವಮೊಗ್ಗ: ಪಿಎಫ್ ಹಣವೂ ಬಂದಿಲ್ಲ, ನಮ್ಮ ಮನೆಯವರ ಸಾವಿನ ನ್ಯಾಯದ ಬಗ್ಗೆ ಬಿಜೆಪಿಯವರೂ ಮಾತಾಡ್ತಿಲ್ಲ ಎಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಲೆಕ್ಕ ಪರಿಶೋಧಕರಾಗಿದ್ದ ಮೃತ ಚಂದ್ರಶೇಖರ್ (Chandrashekar) ಪತ್ನಿ ಅಳಲು ತೋಡಿಕೊಂಡಿದ್ದಾರೆ.
ಮೃತ ಚಂದ್ರಶೇಖರ್ ಅವರ ಪತ್ನಿ ಕವಿತಾ ಅವರು ಸಚಿವ ನಾಗೇಂದ್ರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮನೆಯವರ ಸಾವಿಗೆ ನ್ಯಾಯ ಸಿಗಬೇಕು ಎಂದು ಅಂದಿನಿಂದಲೂ ಕೇಳಿಕೊಂಡು ಬರುತ್ತಿದ್ದರೂ, ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ʻನಮ್ಮ ಮನೆಯವರ ಸಾವಿಗೆ ನ್ಯಾಯ ಬೇಕು ಎಂದು ನಾನು ಅವತ್ತಿನಿಂದಲೂ ಕೇಳುತ್ತಿದ್ದೇನೆ. ಆದರೆ ತಪ್ಪಿತಸ್ಥರಿಗೆ ಈವರೆಗೂ ಶಿಕ್ಷೆಯಾಗಿಲ್ಲ. ಸಚಿವರಿಗೆ ಮಾತ್ರ ಶಿಕ್ಷೆಯಾಗುತ್ತಿದೆ, ಅಧಿಕಾರಿಗಳಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ. ಅಧಿಕಾರಿಗಳು ಆರಾಮಾಗಿ ಹೊರಗಡೆ ಓಡಾಡಿಕೊಂಡಿದ್ದಾರೆʼʼ ಎಂದು ಕವಿತಾ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Valmiki Scam | ಜೈಲಿಗೆ ಹೋಗೋ ಭಯಕ್ಕೆ ಚಂದ್ರಶೇಖರ್ ಆತ್ಮಹತ್ಯೆ
ಪ್ರಕರಣದಲ್ಲಿ ಪರುಶುರಾಮ್ ಮತ್ತು ಪದ್ಮನಾಭ್ ಅವರಿಗೆ ಈವರೆಗೂ ಯಾವುದೇ ಶಿಕ್ಷೆಯಾಗಿಲ್ಲ. ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು. ನಮ್ಮ ಮನೆಯವರಿಗೆ ತೊಂದರೆ ನೀಡಿದ್ದೇ ಅಧಿಕಾರಿಗಳು. ಹೀಗಿರುವಾಗ ನಮಗೆ ಎಲ್ಲಿ ನ್ಯಾಯ ಸಿಕ್ಕಿದೆ ಎಂದು ಕವಿತಾ ಪ್ರಶ್ನಿಸಿದ್ದಾರೆ.
ʻʻಅಧಿಕಾರಿಗಳು ಡ್ಯೂಟಿ ಮಾಡಿಕೊಂಡು ಸಂಬಳ ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಾವು ತೊಂದರೆಗೆ ಒಳಗಾಗಿದ್ದೇವೆ. ಈವರೆಗೂ ನಮಗೆ ಯಾವುದೇ ಪಿಎಫ್ ಹಣವೂ ಬಂದಿಲ್ಲ. ನನ್ನ ಮಗನಿಗೆ ಕೆಲಸ ಕೊಡಿಸುವ ವಿಚಾರವಾಗಿಯೂ ಯಾರೂ ಮಾತನಾಡುತ್ತಿಲ್ಲ. ವಾಲ್ಮೀಕಿ ನಿಗಮದಿಂದಲೂ ನಮಗೆ ಯಾವುದೇ ಫೋನ್ ಬಂದಿಲ್ಲʼʼ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಐಟಿ ಕಂಪನಿ ಖಾತೆಗೆ ಅಕ್ರಮ ವರ್ಗಾವಣೆ!

ಸಚಿವ ನಾಗೇಂದ್ರ ಅವರಿಂದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ನಂಬಿಕೆ ಇತ್ತು. ಬಡವರ ಹಣ ಹೊರಗಡೆ ಬರಬೇಕು ಎಂಬ ಕಾರಣಕ್ಕಾಗಿಯೇ ನಮ್ಮ ಮನೆಯವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಷ್ಟೆಲ್ಲಾ ನಡೆದರೂ ತಮ್ಮ ಮನೆಯವರ ಸಾವಿಗೆ ನ್ಯಾಯ ದೊರಕಿಸುವ ವಿಚಾರದಲ್ಲಿ ಬಿಜೆಪಿ ಸೇರಿದಂತೆ ಯಾರೂ ಮಾತನಾಡುತ್ತಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಸಚಿವರಿಗೆ ಮಾತ್ರ ಶಿಕ್ಷೆಯಾಗುತ್ತಿದೆ, ಅಧಿಕಾರಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಂಡು ನಮ್ಮ ಮನೆಯವರ ಸಾವಿಗೆ ನ್ಯಾಯ ಕೊಡಿಸಬೇಕು ಎಂಬುದೇ ನಮ್ಮ ಆಗ್ರಹ ಎಂದು ಮೃತ ಚಂದ್ರಶೇಖರ್ ಅವರ ಪತ್ನಿ ಕವಿತಾ ಹೇಳಿದ್ದಾರೆ.
