ನವದೆಹಲಿ/ ಮಾಸ್ಕೋ: ಚುನಾವಣೆ ಸಂದರ್ಭದಲ್ಲಿ ಹತ್ತು ವರ್ಷದ ಆಡಳಿತ ಟ್ರೇಲರ್ ಎಂದು ಹೇಳಿದ್ದೆ. ಮುಂದಿನ ಹತ್ತು ವರ್ಷಗಳಲ್ಲಿ ನಾವು ಅತ್ಯಂತ ವೇಗವಾಗಿ ಬೆಳೆಯಲಿದ್ದೇವೆ. ಸೆಮಿ ಕಂಡಕ್ಟರ್‌ನಿಂದ ಹಿಡಿದು ಗ್ರೀನ್ ಎನರ್ಜಿವರೆಗೂ ಎಲ್ಲಾ ವಲಯದಲ್ಲಿ ನಾವು ಬೆಳೆಯಲಿದ್ದೇವೆ. ವಿಶ್ವದ ಹೊಸ ಅಧ್ಯಾಯವನ್ನು ನಾವು ಬರೆಯಲಿದ್ದೇವೆ ಎಂದು ಅತ್ಯಂತ ವಿಶ್ವಾಸದಿಂದ ಹೇಳಬಲ್ಲೆ. ಸವಾಲಿಗೆ ಸವಾಲು ಹಾಕುವುದು ನನ್ನ ಡಿಎನ್‌ಎಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ರಷ್ಯಾ (Russia) ಪ್ರವಾಸದಲ್ಲಿರುವ ಮೋದಿ ಮಾಸ್ಕೋದಲ್ಲಿ (Moscow) ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಇಂದು ಭಾರತ ಜಾಗತಿಕವಾಗಿ ಮೂರನೇ ದೊಡ್ಡ ಸ್ಟಾರ್ಟ್ಅಪ್ ಇಕೋ ಸಿಸ್ಟಮ್ ಹೊಂದಿದೆ. 2014ರಲ್ಲಿ ಮೊದಲ ಬಾರಿಗೆ ನನಗೆ ಸೇವೆ ಮಾಡುವ ಅವಕಾಶ ಸಿಕ್ಕಿತು. ಆಗ ಬಹಳ ವಿರಳ ಪ್ರಮಾಣದಲ್ಲಿ ಸ್ಟಾರ್ಟ್ಅಪ್‌ಗಳಿದ್ದವು. ಇಂದು ಲಕ್ಷಾಂತರ ಸ್ಟಾರ್ಟ್ಅಪ್‌ಗಳಿದೆ. ಭಾರತೀಯ ಯುವಕರ ಸಾಮರ್ಥ್ಯ ಕಂಡು ವಿಶ್ವವೂ ಆಕರ್ಷಿತಗೊಂಡಿದೆ ಎಂದರು.
Advertisement
Advertisement
ವಿಶ್ವದ ಜನರು ಭಾರತಕ್ಕೆ ಬಂದು ಈ ದೇಶ ಬದಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಭಾರತ ಜಿ20 ಅಂತಹ ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ. ಭಾರತ ಕಳೆದ ಹತ್ತು ವರ್ಷದಲ್ಲಿ ವಿಮಾನ ನಿಲ್ದಾಣ ಎರಡು ಪಟ್ಟು ಹೆಚ್ಚಿಸಿದೆ. ಹತ್ತು ವರ್ಷಗಳಲ್ಲಿ 40 ಸಾವಿರ ಕಿ.ಮೀಗೂ ಅಧಿಕ ರೈಲ್ವೆಲೈನ್ ವಿದ್ಯುಧೀಕರಣ ಮಾಡಿದೆ. ಈಗ ಭಾರತದ ಶಕ್ತಿ ಎಲ್ಲರಿಗೂ ತಿಳಿಯುತ್ತಿದೆ ಎಂದು ಹೇಳಿದರು.
Advertisement
ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ದೊಡ್ಡ ಶಕ್ತಿಯಾಗಿದೆ. ಎಲ್1 ಪಾಯಿಂಟ್‌ನಿಂದ ಭಾರತ ಸೂರ್ಯನ ಅಧ್ಯಯನ ಮಾಡುತ್ತಿದೆ. ಭಾರತ ವಿಶ್ವದ ಅತಿ ಎತ್ತರದ ರೈಲ್ವೆಬ್ರಿಡ್ಜ್ ಹೊಂದಿದೆ. ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಿದೆ. 140 ಕೋಟಿ ಜನರ ಸಾಮರ್ಥ್ಯದ ಮೇಲೆ ಮತ್ತು ಅನಿವಾಸಿ ಭಾರತೀಯರ ಮೇಲೆ ನಂಬಿಕೆ ಇರಿಸಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
Advertisement
140 ಕೋಟಿ ಭಾರತೀಯರನ್ನು ಕೋವಿಡ್ ಸಂಕಷ್ಟದಿಂದ ಹೊರ ತಂದಿದೆ. ಸಂಕಷ್ಟದ ಸಂದರ್ಭದಲ್ಲೂ ಆರ್ಥಿಕತೆಯನ್ನು ಸಧೃಡವಾಗಿಟ್ಟಿದೆ. ಮೂಲ ಸೌಕರ್ಯಗಳ ನಿರ್ಮಾಣದಲ್ಲಿ ನಾವು ಹೊಂದಾಣಿಕೆ ಮಾಡಿಕೊಂಡಿಲ್ಲ. ಆಯುಷ್ಮಾನ್ ಭಾರತ್ ವಿಶ್ವದ ಅತಿದೊಡ್ಡ ಹೆಲ್ತ್ ಮಿಷನ್. ಇದೆಲ್ಲವೂ 140 ಕೋಟಿ ಜನರಿಂದ ಸಾಧ್ಯವಾಗಿದೆ. ಅವರು ಕನಸು ಕಾಣುತ್ತಾರೆ, ಅದನ್ನು ನನಸು ಮಾಡಲು ಪ್ರಯತ್ನಿಸುತ್ತಾರೆ. ಜನರ ಈ ಬದಲಾವಣೆ ಅವರ ವಿಶ್ವಾಸದಲ್ಲಿ ಕಾಣುತ್ತಿದೆ ಎಂದರು.
ಕ್ರೀಡೆಯಲ್ಲೂ ನಮ್ಮ ಆಟಗಾರರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ಯಾರಿಸ್ ಒಲಿಂಪಿಕ್‌ಗೆ ಅತ್ಯುತ್ತಮ ತಂಡ ಕಳುಹಿಸಲಾಗಿದೆ. ಅವರು ಹೇಗೆ ಪ್ರದರ್ಶನ ಮಾಡಲಿದ್ದಾರೆ ನೀವೂ ನೋಡಿ. ಇದೇ ಆತ್ಮ ವಿಶ್ವಾಸ ಭಾರತದ ಯುವ ಶಕ್ತಿ. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಪಾಲು 15% ರಷ್ಟಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಳವಾಗಲಿದೆ. ಮುಂದಿನ ಹತ್ತು ವರ್ಷ ಅತ್ಯಂತ ವೇಗವಾಗಿ ಎಲ್ಲಾ ವಲಯದಲ್ಲಿ ನಾವು ಬೆಳೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಷ್ಯಾದಲ್ಲಿರುವ ಜನರು ಭಾರತ-ರಷ್ಯಾ ಸಂಬಂಧ ಹೆಚ್ಚುಸುತ್ತಿದ್ದೀರಿ. ರಷ್ಯಾ-ಭಾರತದ ನಡುವಿನ ಸಂಬಂಧವನ್ನು ಕಾಪಾಡಲಾಗುತ್ತಿದೆ. ರಷ್ಯಾ ಭಾರತದ ಸುಖ-ದುಃಖದ ಜೊತೆಗಾರ. ಇದನ್ನು ಸ್ನೇಹ ಎನ್ನುತ್ತಾರೆ. ಈ ಸಂಬಂಧ ಪರಸ್ಪರ ಸ್ನೇಹ ಮತ್ತು ಗೌರವದಿಂದ ಬೆಳೆದಿದೆ. ಭಾರತದ ಯಶಸ್ವಿ ಸಂಬಂಧಕ್ಕೆ ಅಧ್ಯಕ್ಷ ಪುಟಿನ್ ಕಾರಣ. ಕಳೆದ ಹತ್ತು ವರ್ಷದಲ್ಲಿ ನಾನು ಅವರನ್ನು 17 ಬಾರಿ ಭೇಟಿಯಾಗಿದ್ದೇನೆ. ಯುದ್ಧದ ಅವಧಿಯಲ್ಲಿ ನಮ್ಮ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾಗ ಭಾರತಕ್ಕೆ ಪುಟಿನ್ ಸಹಾಯ ಮಾಡಿದರು ಎಂದು ನುಡಿದರು.
ಎಲ್ಲಾ ರಾಷ್ಟ್ರೀಯ ಹಬ್ಬಗಳು, ಭಾರತೀಯ ಹಬ್ಬಗಳನ್ನು ಅದ್ಧೂರಿಯಾಗಿ ಇಲ್ಲಿ ಆಚರಿಸಲಾಗುತ್ತದೆ. ಮುಂದೆ ಆಗಸ್ಟ್ 15 ಕೂಡಾ ಅದ್ಧೂರಿಯಾಗಿ ಆಚರಿಸಬೇಕು. ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಆಸಕ್ತಿಯಿಂದ ರಷ್ಯನ್ನರು ಭಾಗಿಯಾಗಿದ್ದರು. ನಮ್ಮ ಆಚರಣೆಯಲ್ಲಿ ಮುಕ್ತವಾಗಿ ಭಾಗಿಯಾಗುತ್ತಾರೆ. ರಷ್ಯಾದಲ್ಲಿ ಎರಡು ಹೊಸ ಕೌನ್ಸಿಲೇಟ್ ತೆರೆಯುತ್ತೇವೆ. ಇದರಿಂದ ಪ್ರಯಾಣ ಮತ್ತು ವ್ಯಾಪಾರಕ್ಕೆ ಹೆಚ್ಚು ಸಹಕಾರವಾಗಲಿದೆ ಎಂದು ಮೋದಿ ತಿಳಿಸಿದರು.