– ಕಾಳಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲೂ ಹಾದುಹೋಗುವ ವಿದ್ಯುತ್ ಮಾರ್ಗ
– 72,000 ಮರಗಳಿಗೆ ಕೊಡಲಿ ಪೆಟ್ಟು
ನವದೆಹಲಿ: ಪಶ್ಚಿಮ ಘಟ್ಟದ ಕಾಳಿ ಹುಲಿ ಸಂರಕ್ಷಿತಾರಣ್ಯ ಸೇರಿ ಕರ್ನಾಟಕದ 174 ಹೆಕ್ಟೇರ್ ದಟ್ಟಾರಣ್ಯ ಪ್ರದೇಶದಲ್ಲಿ ವಿದ್ಯುತ್ ತಂತಿ ಎಳೆಯುವ ಗೋವಾ-ತಮ್ನಾರ್ ವಿದ್ಯುತ್ ಯೋಜನೆಗೆ (Goa Tamnar Transmission Project) ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಕೇಂದ್ರ ಸರ್ಕಾರ (Central Govt) ಕೊಟ್ಟ ಮಾತನ್ನ ಮರೆತು, ರಾಜ್ಯದ ವಿರೋಧದ ನಡುವೆಯೂ ಮೊದಲ ಹಂತದ ಯೋಜನೆಗೆ ಒಪ್ಪಿಗೆ ಸೂಚಿಸಿದೆ.

ಏನಿದು ಯೋಜನೆ?
ಗೋವಾ-ತಮ್ನಾರ್ ಪ್ರಸರಣ ಯೋಜನೆಯು ಕರ್ನಾಟಕದ ಧಾರವಾಡದ (Dharwad) ನರೇಂದ್ರದಿಂದ ಗೋವಾಕ್ಕೆ 400 ಕೆ.ವಿ. ವಿದ್ಯುತ್ ಪೂರೈಸುವ ಕೇಂದ್ರ ಸರ್ಕಾರದ ಅಂತರರಾಜ್ಯ ವಿದ್ಯುತ್ ಮಾರ್ಗವಾಗಿದೆ. ಗೋವಾದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪೂರೈಸುವುದು ಮತ್ತು ಪಶ್ಚಿಮ ಗ್ರಿಡ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಪಶ್ಚಿಮ ಘಟ್ಟಗಳ ಅರಣ್ಯ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶದ (Kali Tiger Reserve) ಮೂಲಕ ಹಾದುಹೋಗುವ ಈ ವಿವಾದಾತ್ಮಕ ಯೋಜನೆಗೆ 174 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಭೂಮಿ ಹಾಗೂ ಸಾವಿರಾರು ಮರಗಳ ಮಾರಣಹೋಮದ ಭೀತಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಯೋಜನೆ ಜಾರಿಗೆ ಉತ್ತರ ಕನ್ನಡ ಜಿಲ್ಲೆಯ 97 ಹೆಕ್ಟೇರ್, ಧಾರವಾಡ ಜಿಲ್ಲೆಯ 7.75 ಹೆಕ್ಟೇರ್, ಬೆಳಗಾವಿ ಜಿಲ್ಲೆಯ 70 ಹೆಕ್ಟೇರ್ ದಟ್ಟಾರಣ್ಯ ಪ್ರದೇಶ ಗುರುತಿಸಲಾಗಿದೆ. ಒಟ್ಟಾರೆ 72 ಸಾವಿರ ಮರಗಳು ಅಪಾಯಕ್ಕೆ ಒಳಗಾಗಲಿವೆ. ವಿದ್ಯುತ್ ತಂತಿಗಳು ಎತ್ತರದಿಂದ ಹಾದು ಹೋಗಲಿವೆ.

ಕರ್ನಾಟಕದ ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಹಾಗೂ ಗೋವಾದ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳು ಈ ಯೋಜನೆಯಿಂದ ಹಾನಿಯಾಗುವ ಆತಂವಿದೆ. ಇದರಿಂದ ಯೋಜನೆಗೆ ಕರ್ನಾಟಕ ವಿರೋಧಿಸಿತ್ತು. ಆದ್ರೆ ಮಹದಾಯಿ ಯೋಜನೆಗೆ ಅನುಮತಿ ನೀಡುವ ಭರವಸೆ ಮೂಲಕ ಯೋಜನೆಗೆ ಒಪ್ಪಿಗೆ ನೀಡಲು ಕೇಂದ್ರ ಮನವಿ ಮಾಡಿತ್ತು. ನಂತರ ಮಹದಾಯಿ ಯೋಜನೆಗೆ ಅನುಮತಿ ನೀಡುವುದಾದರೆ ತಮ್ನಾರ್ ವಿದ್ಯುತ್ ಯೋಜನೆಗೆ ಸಹಕಾರ ನೀಡುವ ಭರವಸೆಯನ್ನು ಕರ್ನಾಟಕ ಸರ್ಕಾರ ನೀಡಿತ್ತು. ಆದರೀಗ ಮಹದಾಯಿ ಯೋಜನೆಗೆ ಒಪ್ಪಿಗೆ ನೀಡುವ ಮೊದಲೇ ಗೋವಾ ತಮ್ನಾರ್ ವಿದ್ಯುತ್ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಮೂಲಕ ಕೊಟ್ಟ ಮಾತು ಉಳಿಸಿಕೊಳ್ಳದೇ ರಾಜ್ಯಕ್ಕೆ ದ್ರೋಹ ಬಗೆದಂತಾಗಿದೆ.
ಮುಖ್ಯಾಂಶಗಳು
* ಗುರುತಿಸಿದ ಒಟ್ಟು ಅರಣ್ಯ ಪ್ರದೇಶ- 174.65 ಹೆಕ್ಟೇರ್
* ಯೋಜನೆ ವ್ಯಾಪ್ತಿಯಲ್ಲಿರುವ ಮರಗಳು- 72,552
* ಪರ್ಯಾಯ ಅರಣ್ಯ ಬೆಳೆಸಲು ಗುರುತಿಸಿದ ಜಾಗ- 360 ಹೆಕ್ಟೇರ್
* ಯೋಜನೆ ಹೆಸರು- ಗೋವಾ-ತಮ್ನಾರ 440 ಕೆವಿ. ಡಿ/ಸಿ ಕ್ವಾಡ್ ಟ್ರಾನ್ಸಮಿಷನ್ ಲೈನ್
* ಎಲ್ಲಿಂದ ಎಲ್ಲಿಗೆ- ಧಾರವಾಡ ಜಿಲ್ಲೆಯ ನರೇಂದ್ರದಿಂದ ಗೋವಾ ರಾಜ್ಯದ ಮಾಪಸಾ ಕೇಂದ್ರಕ್ಕೆ
ಇತ್ತೀಚೆಗೆ ಗೋವಾ-ತಮ್ನಾರ್ ವಿದ್ಯುತ್ ವಿತರಣಾ ಜಾಲ ನಿರ್ಮಾಣಕ್ಕಾಗಿ ಕಾಳಿ ಹುಲಿ ಸಂರಕ್ಷಣಾ ಪ್ರದೇಶದ 102 ಎಕ್ರೆ ಅರಣ್ಯ ಬಳಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಅನುಮೋದನೆ ನೀಡಿತ್ತು. ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂವತ್ತು ಷರತ್ತು ವಿಧಿಸಿ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿತ್ತು.

