ನವದೆಹಲಿ/ಬೆಂಗಳೂರು: ಎಲ್‌ನಿನೋ ದುಷ್ಪರಿಣಾಮದಿಂದಾಗಿ ಕರ್ನಾಟಕದಲ್ಲಿ(Karnataka) ಭೀಕರ ಬರಗಾಲ ಎದುರಾಗಿದ್ದು, ಕುಡಿಯುವ ನೀರಿಗೂ ಸಮಸ್ಯೆ ಸೃಷ್ಟಿಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲೂ ತಮಿಳುನಾಡಿಗೆ(Tamil Nadu) ಮುಂದಿನ 15 ದಿನಗಳ ಕಾಲ ದಿನಂಪ್ರತಿ 3,500 ಕ್ಯೂಸೆಕ್ (ಸುಮಾರು 4.5 ಟಿಎಂಸಿ) ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕರ್ನಾಟಕಕ್ಕೆ ಆದೇಶಿಸಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಶಿಫಾರಸನ್ನು ಪ್ರಾಧಿಕಾರ ಎತ್ತಿಹಿಡಿದಿದ್ದು, ಈ ನಿರ್ಧಾರದಿಂದ ಕನ್ನಡಿಗರ ಆಕ್ರೋಶ ಮುಗಿಲು ಮುಟ್ಟಿದೆ. ರಾಜ್ಯಾದ್ಯಂತ ಮತ್ತೆ ‘ಕರ್ನಾಟಕ ಬಂದ್’ ಆಗುವ ಲಕ್ಷಣಗಳು ಗೋಚರಿಸುತ್ತಿವೆ.
ದೆಹಲಿಯಲ್ಲಿ ಎಸ್.ಕೆ. ಹಲ್ದಾರ್ ಅಧ್ಯಕ್ಷತೆಯಲ್ಲಿ ಇಂದು ಮಧ್ಯಾಹ್ನ ನಡೆದ ಸಿಡಬ್ಲ್ಯೂಎಂಎ ಸಭೆಯಲ್ಲಿ ಕರ್ನಾಟಕದ ಪರವಾಗಿ ಗೌರವ್ ಗುಪ್ತಾ ಖುದ್ದಾಗಿ ಭಾಗವಹಿಸಿದ್ದರೆ, ತಮಿಳುನಾಡು ಅಧಿಕಾರಿಗಳು ವರ್ಚುವಲ್ ಮೂಲಕ ಪಾಲ್ಗೊಂಡಿದ್ದರು. ಹೀಗಾಗಿ ಈ ಸಭೆಯಲ್ಲಿ ಕರ್ನಾಟಕದ ವಾದ ಏನು? ತಮಿಳುನಾಡು ಬೇಡಿಕೆ ಏನು? ಪ್ರಾಧಿಕಾರದ ಆದೇಶದಲ್ಲಿ ಏನಿದೆ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಕರ್ನಾಟಕದ ವಾದ ಏನು?
ಸೂಪರ್ ಎಲ್ ನಿನೋ ಪರಿಣಾಮದಿಂದ ಕರ್ನಾಟಕಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣವು ಕಳೆದ 30 ವರ್ಷಗಳ ಸರಾಸರಿಗಿಂತ ಬರೋಬ್ಬರಿ 65.65% ನಷ್ಟು ಕಡಿಮೆಯಾಗಿದೆ. ಕರ್ನಾಟಕದಿಂದ ಬಿಡುಗಡೆಯಾಗುವ ನೀರಿನ ಜೊತೆಗೆ, ಶೀಘ್ರದಲ್ಲೇ ಆರಂಭವಾಗಲಿರುವ ಈಶಾನ್ಯ (North-East) ಮಳೆಗಾಲದ ಲಾಭವೂ ತಮಿಳುನಾಡಿಗೆ ಸಿಗಲಿದೆ.
ಕರ್ನಾಟಕದಿಂದ ಈಗಾಗಲೇ ಬಿಡುಗಡೆಗೊಂಡ ನೀರಿನ ಪರಿಣಾಮವಾಗಿ ತಮಿಳುನಾಡಿನ ಜಲಾಶಯಗಳಲ್ಲಿ ಗಣನೀಯ ಪ್ರಮಾಣದ ನೀರು ಸಂಗ್ರಹವಾಗಿದೆ. ಈ ಹಿಂದಿನ ಬರಗಾಲದ ವರ್ಷಗಳಲ್ಲೂ ಈಶಾನ್ಯ ಮಳೆಯು ತಮಿಳುನಾಡಿನ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರನ್ನು ತುಂಬಿಸಿದೆ.
ಬಿಳಿಗುಂಡ್ಲುವಿನಲ್ಲಿ 3,500 ಕ್ಯೂಸೆಕ್ ನೀರಿನ ಹರಿವು ಖಚಿತಪಡಿಸಲು, ನದಿಪಾತ್ರ ಒಣಗಿರುವುದರಿಂದ ಮತ್ತು ಸಾಗಣೆ ನಷ್ಟದ ಕಾರಣದಿಂದ ಕರ್ನಾಟಕವು ಸುಮಾರು 7,000 ಕ್ಯೂಸೆಕ್ ಬಿಡುಗಡೆ ಮಾಡಬೇಕಾಗುತ್ತದೆ. ಜೂನ್ 2027ರವರೆಗೆ ರಾಜ್ಯದ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಕರ್ನಾಟಕಕ್ಕೆ ಸುಮಾರು 40 ಟಿಎಂಸಿ ನೀರನ್ನು ಕಾಯ್ದಿರಿಸುವ ಅಗತ್ಯವಿದೆ.
ಕರ್ನಾಟಕದ ವಿನಂತಿ ಏನು?
CWRC ನೀಡಿರುವ ನಿರ್ದೇಶನವನ್ನು ಇನ್ನೂ ಎರಡು ವಾರಗಳ ಕಾಲ ತಾತ್ಕಾಲಿಕವಾಗಿ ತಡೆಹಿಡಿದು ಮಳೆಯ ಸ್ಥಿತಿಯನ್ನು ಮರುಪರಿಶೀಲಿಸಬೇಕು. ಇದನ್ನೂ ಓದಿ: ಕಾವೇರಿ ವಿಚಾರವಾಗಿ ಭಾನುವಾರ ಸರ್ವಪಕ್ಷ ಸಭೆ: ಸಿಎಂ
ತಮಿಳುನಾಡು ವಾದ ಏನಿತ್ತು?
ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ತಮಿಳುನಾಡಿಗೆ ಒಟ್ಟು 32 ಟಿಎಂಸಿ ನೀರು ಬರಬೇಕಿತ್ತು. ಆದರೆ ಕರ್ನಾಟಕ ಕೇವಲ 3 ಟಿಎಂಸಿ ನೀರನ್ನು ಮಾತ್ರ ಬಿಡುಗಡೆ ಮಾಡಿದೆ.ಇದರಿಂದಾಗಿ ಮೆಟ್ಟೂರು ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಕೇವಲ 40 ಟಿಎಂಸಿಗೆ ಕುಸಿದಿದೆ. ಕನಿಷ್ಠ 50 ಟಿಎಂಸಿ ನೀರಿದ್ದರೆ ಮಾತ್ರ ನೀರಾವರಿಗೆ ನೀರು ಬಿಡಲು ಸಾಧ್ಯ.
ಸೂಕ್ತ ನೀರಿನ ಸಂಗ್ರಹವಿಲ್ಲದ ಕಾರಣ ಜೂನ್ 14 ರಂದು ಕೃಷಿಗಾಗಿ ತೆರೆಯಬೇಕಿದ್ದ ಮೆಟ್ಟೂರು ಜಲಾಶಯವನ್ನು ಇನ್ನೂ ತೆರೆಯಲಾಗಿಲ್ಲ. ನಮ್ಮ ‘ಕುರುವೈ’ ಕೃಷಿಗೆ ಯಾವುದೇ ತೊಂದರೆಯಾಗದಂತೆ ಮುಂದಿನ 15 ದಿನಗಳ ಕಾಲ ದಿನಂಪ್ರತಿ 11,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶಿಸಬೇಕು.
ಪ್ರಾಧಿಕಾರದ ಆದೇಶದಲ್ಲಿ ಏನಿದೆ?
ಪ್ರಸ್ತುತ ಕರ್ನಾಟಕದ ಅಣೆಕಟ್ಟುಗಳಲ್ಲಿ 55 ಟಿಎಂಸಿ ನೀರಿದೆ. ಮುಂಬರುವ ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಕರ್ನಾಟಕದ ಜಲಮೂಲಗಳಿಗೆ ದಿನಕ್ಕೆ 1 ರಿಂದ 2 ಟಿಎಂಸಿ ನೀರು ಹರಿದುಬರುವ ನಿರೀಕ್ಷೆಯಿದೆ. ಹೀಗಾಗಿ ಶೀಘ್ರದಲ್ಲೇ ಒಟ್ಟು ನೀರು 60 ರಿಂದ 70 ಟಿಎಂಸಿಗೆ ತಲುಪಲಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ನಿಯಂತ್ರಣ ಸಮಿತಿಯ (CWRC) ಶಿಫಾರಸಿನಂತೆ ಮುಂದಿನ 15 ದಿನಗಳವರೆಗೆ ಒಟ್ಟು 4.5 ಟಿಎಂಸಿ (ದಿನಂಪ್ರತಿ 3,500 ಕ್ಯೂಸೆಕ್) ನೀರು ಬಿಡುಗಡೆ ಮಾಡಬೇಕು.

ಯಾವ ತಿಂಗಳು ಎಷ್ಟು ಟಿಎಂಸಿ ನೀರು ಬಿಡಬೇಕು?
ಕಾವೇರಿ ನ್ಯಾಯಾಧಿಕರಣ ನೀಡಿದ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ 2018ರ ಫೆಬ್ರವರಿ 15 ರಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿತ್ತು. ಈ ತೀರ್ಪಿನ ಅನ್ವಯ ಕರ್ನಾಟಕಕ್ಕೆ 284 ಟಿಎಂಸಿ, ತಮಿಳುನಾಡು 177.25 ಟಿಎಂಸಿ, ಕೇರಳ 30 ಟಿಎಂಸಿ, ಪುದುಚೇರಿಗೆ 10 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ.
ಈ ತೀರ್ಪಿನ ಅನ್ವಯ ಜೂನ್ 9.19, ಜುಲೈ 31.24, ಆಗಸ್ಟ್ 45.95, ಸೆಪ್ಟೆಂಬರ್ 36.76, ಅಕ್ಟೋಬರ್ 20.22, ನವೆಂಬರ್ 13.78, ಡಿಸೆಂಬರ್ 7.35, ಜನವರಿ 2.76 ಟಿಎಂಸಿ ಬಿಡಬೇಕು. ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ತಲಾ 2.5 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು.
ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?
ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನನವರು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ. ಇದನ್ನೂ ಓದಿ: ಸಿಜೆಪಿ ಪ್ರತಿಭಟನಾಕಾರರಿಗೆ ರಿಲೀಫ್, ಕ್ರಿಮಿನಲ್‌ಗಳ ವಿರುದ್ಧ ತನಿಖೆ: ದೆಹಲಿ ಸರ್ಕಾರ
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.
