– 13 ಪ್ರಕರಣ ದಾಖಲಿಸಿ ಪೊಲೀಸರಿಂದ ತನಿಖೆ
ನವದೆಹಲಿ: ನೀಟ್ (NEET UG) ಪರೀಕ್ಷೆ ಅಕ್ರಮ ಖಂಡಿಸಿ ಸಿಜೆಪಿ ಪ್ರತಿಭಟನೆಯಲ್ಲಿ (CJP Protest) ಭಾಗಿಯಾದ ಪ್ರತಿಭಟನಕಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ. ಆದರೆ ಅಪರಾಧ ಹಿನ್ನೆಲೆ ಹೊಂದಿರುವವರಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ದೆಹಲಿ ಸರ್ಕಾರ (Delhi Government) ಹೇಳಿದೆ.
ಜುಲೈ 20 ರಂದು ಕಾಕ್ರೋಚ್ ಜನತಾ ಪಾರ್ಟಿ (CJP) ಜಂತರ್ ಮಂತರ್‌ನಿಂದ ಆಯೋಜಿಸಿದ್ದ ಚಲೋ ಸಂಸದ್ ಮೆರವಣಿಗೆಯ ವೇಳೆ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದರು ಎನ್ನಲಾದ ವ್ಯಕ್ತಿಗಳ ವಿರುದ್ಧ ಈ ಪ್ರಕರಣಗಳನ್ನು ದಾಖಲಿಸಲಾಗಿತ್ತು.
‘ಚಲೋ ಸಂಸದ್’ ಮೆರವಣಿಗೆಯ ವೇಳೆ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ ಹಾಗೂ ವಾಹನಗಳನ್ನು ಜಖಂಗೊಳಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಮೂಲಕ 2,873 ಜನರನ್ನು ಗುರುತಿಸಿದ್ದರು. ಅವರಲ್ಲಿ ಸುಮಾರು 1,000 ಜನರು ಅಪರಾಧ ಹಿನ್ನೆಲೆಯನ್ನು ಹೊಂದಿದ್ದರು. ಇದನ್ನೂ ಓದಿ: ಅಮಿತ್ ಶಾ ಅವರನ್ನು ಹೊರಗೆ ಎಳೆದು ತಂದು ಜನರ ಮುಂದೆ ನಿಲ್ಲಿಸುತ್ತೇವೆ: ಖರ್ಗೆ ಕಿಡಿ

ಈ ಸಂಬಂಧ ದೆಹಲಿ ಸರ್ಕಾರದ ಗೃಹ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನೀಟ್ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಟ್ಟು 13 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ತಿಳಿಸಿದೆ.
ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ವಿರುದ್ಧ ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿಯ (NCT) ಯಾವುದೇ ಪೊಲೀಸ್ ಪ್ರಾಧಿಕಾರಗಳು ಇನ್ಮುಂದೆ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಸುಪ್ರೀಂ ಕೋರ್ಟ್‌ನ ಆದೇಶದಲ್ಲಿ ಉಲ್ಲೇಖಿಸಲಾದ ನಿಯಮದಂತೆ ಈ ರಕ್ಷಣೆಯು ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಿದೆ. ಇದನ್ನೂ ಓದಿ: ಕೇಸರಿ ಬಣ್ಣದಲ್ಲಿ ಹಾಕಿ ತಂಡ| ಇದು ದೇಶದ ಇತಿಹಾಸ ಬದಲಿಸುವ ಯತ್ನ: ಪ್ರಿಯಾಂಕಾ ಆಕ್ರೋಶ
ಇದೇ ಪ್ರಕರಣಗಳಲ್ಲಿ ಈಗಾಗಲೇ ಬಂಧಿಸಲ್ಪಟ್ಟ ಅಥವಾ ವಶಕ್ಕೆ ಪಡೆಯಲಾದ ವ್ಯಕ್ತಿಗಳನ್ನು ಬಿಡುಗಡೆ ಮಾಡಲು ಪರಿಶೀಲನಾ ಪ್ರಕ್ರಿಯೆಯನ್ನು ಶೀಘ್ರವಾಗಿ ಕೈಗೊಳ್ಳುವಂತೆ ಸರ್ಕಾರ ನಿರ್ದೇಶಿಸಿದೆ. ಪ್ರತಿಭಟನೆಯಲ್ಲಿ ಭಾಗಿಯಾದ ವ್ಯಕ್ತಿಗಳ ವಿರುದ್ಧ ಯಾವುದೇ ರೀತಿಯ ತನಿಖೆ ಅಥವಾ ಮುಂದಿನ ಕ್ರಮಗಳನ್ನು ಜರುಗಿಸದೆ ಈ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ.
