– ರಾಜ್ಯ ಸರ್ಕಾರದ ವಿರುದ್ಧ 175 ಕಿ.ಮೀ. ಪಾದಯಾತ್ರೆ ಆರಂಭ
– ʻಸರ್ಕಾರ ತೊಲಗುವವರೆಗೂ ಹೋರಾಟʼ – ಗುಡುಗಿದ ಬಿಎಸ್‌ವೈ
ರಾಯಚೂರು: ರಾಜ್ಯ ಸರ್ಕಾರದ ವೈಫಲ್ಯಗಳನ್ನ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ಅಧಿಕೃತ ಚಾಲನೆ ದೊರೆತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yediyurappa) ಸೇರಿದಂತೆ ಬಿಜೆಪಿ ನಾಯಕರು ಕಹಳೆ ಮೊಳಗಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಕಹಳೆ ಊದುವ ಮೂಲಕ ವಿಜಯೇಂದ್ರ (BY Vijayendra), ಆರ್.ಅಶೋಕ್, ಶ್ರೀರಾಮುಲು ಹಾಗೂ ಛಲವಾದಿ ನಾರಾಯಣಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ರೈತಗೀತೆಯೊಂದಿಗೆ ಪಾದಯಾತ್ರೆಯ ವೇದಿಕೆ ಕಾರ್ಯಕ್ರಮ ಆರಂಭವಾಯಿತು.

ಸುಮಾರು 175 ಕಿ.ಮೀ. ಪಾದಯಾತ್ರೆ ಇದಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತನ್ನ ಆಕ್ರೋಶವನ್ನ ಹೊರಹಾಕಲು ಮುಂದಾಗಿದೆ. ಕಾರ್ಯಕ್ರಮ ವೇದಿಕೆಯಲ್ಲಿ ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಶ್ರೀರಾಮುಲು, ಜನಾರ್ದನ ರೆಡ್ಡಿ, ಛಲವಾದಿ ನಾರಾಯಣಸ್ವಾಮಿ, ಜಗದೀಶ್ ಶೆಟ್ಟರ್, ಸಿ.ಟಿ ರವಿ (CT Ravi) ಸೇರಿದಂತೆ ಹಲವು ಬಿಜೆಪಿ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಾದಯಾತ್ರೆ ಸಮಾವೇಶಕ್ಕೆ ಚಾಲನೆ ನೀಡುವುದಕ್ಕೂ ಮುನ್ನ ಬಿ.ವೈ ವಿಜಯೇಂದ್ರ ಅವರು ಗುರಗುಂಟಾ ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಪಾದಯಾತ್ರೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು. ಈ ವೇಳೆ ಶಾಸಕ ಮಾನಪ್ಪ ವಜ್ಜಲ್, ಪರಿಷತ್ ಸದಸ್ಯ ರವಿಕುಮಾರ್, ಪ್ರತಾಪಗೌಡ ಪಾಟೀಲ್, ಬಂಗಾರು ಹನುಮಂತು ಹಾಗೂ ಬಸವರಾಜ ದಡೆಸಗೂರು ಸಾಥ್ ನೀಡಿದರು. ಬಳಿಕ ಗಜಯೋಗಿ ಶಿವಾಚಾರ್ಯ ಶ್ರೀಗಳ ಆಶೀರ್ವಾದವನ್ನೂ ವಿಜಯೇಂದ್ರ ಪಡೆದರು.
ಇದಕ್ಕೂ ಮುನ್ನ ಶಾಸಕ ಮಾನಪ್ಪ ವಜ್ಜಲ್ ಅವರ ನಿವಾಸಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಹಾಗೂ ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಬಿಜೆಪಿ ನಾಯಕರು ಭೇಟಿ ನೀಡಿದ್ದರು.

ʻಸರ್ಕಾರ ತೊಲಗುವವರೆಗೂ ಹೋರಾಟʼ – ಗುಡುಗಿದ ಬಿಎಸ್‌ವೈ
ಬಳ್ಳಾರಿ ಚಲೋ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ ಅವರು, ಜನಾಕ್ರೋಶಕ್ಕೆ ಮಣಿದು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹತ್ತು ಹಲವು ಹಗರಣಗಳಲ್ಲಿ ಸರ್ಕಾರ ಮುಳುಗಿದೆ. ಇಂತಹ ಸರ್ಕಾರದ ವಿರುದ್ಧ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಹೋರಾಟಕ್ಕೆ ಇಳಿದಿದ್ದಾರೆ. ಈ ಸರ್ಕಾರ ತೊಲಗುವವರೆಗೂ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಗುಡುಗಿದರು.
ಇದೇ ವೇಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅಮೆರಿಕಾದಿಂದ ಮರಳಿದ ಬಳಿಕ ದೇಶದಲ್ಲೇ ಸಂಚಲನ ಮೂಡಿಸುವ ವಿಚಾರ ಬಹಿರಂಗಪಡಿಸುವುದಾಗಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ʻಕುಮಾರಸ್ವಾಮಿ ಅವರು ಸುಮ್ಮನೆ ಹೇಳುವುದಿಲ್ಲ. ಅವರು ಹೇಳಿದ್ದಾರೆ ಎಂದರೆ ಸರ್ಕಾರದಲ್ಲೇ ಸಂಚಲನ ಮೂಡಿಸುವ ವಿಷಯ ಇರಬಹುದು. ಅವರ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆʼ ಎಂದು ತಿಳಿಸಿದರು.
