Connect with us

Bengaluru City

ಕೊನೆಯುಸಿರು ಇರೋವರೆಗೂ ನಾನು ರೈತರಿಗಾಗಿ ಹೋರಾಡ್ತೀನಿ: ಬಿಎಸ್‍ವೈ ವಿದಾಯ ಭಾಷಣ

Published

on

ಬೆಂಗಳೂರು: 56 ಗಂಟೆಗಳ ಕಾಲ ಕರುನಾಡಿನ ರಾಜನಾಗಿದ್ದ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

104 ಸದಸ್ಯರ ಹೊಂದಿ ಈ ಬಾರಿ ಅಧಿಕಾರವನ್ನೇ ನಡೆಸಿಯೇ ತೀರುತ್ತೇವೆ ಎಂದಿದ್ದ ಬಿಎಸ್ ಯಡಿಯೂರಪ್ಪ ವಿಶ್ವಾಸ ಮತಯಾಚನೆ ನಡೆಸದೇ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದ್ದಾರೆ.

ವಿಶ್ವಾಸಮತ ಯಾಚನೆಗೂ ಮುನ್ನವೇ ಯಡಿಯೂರಪ್ಪನವರು ತಮ್ಮ ಸೋಲನ್ನು ಒಪ್ಪಿಕೊಂಡರು. ರಾಜೀನಾಮೆ ನೀಡುವ ಮುನ್ನ ಭಾಷಣ ಮಾಡಿದ ಬಿಎಸ್‍ವೈ, ಏಪ್ರಿಲ್ 14 2016ರಂದು ರಾಜ್ಯಾಧ್ಯಕ್ಷ ಮತ್ತು ಸಿಎಂ ಅಭ್ಯರ್ಥಿಯಾಗಿ ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಘೋಷಣೆ ಮಾಡಿದರು. ಪರಿವರ್ತನಾ ಯಾತ್ರೆಯಲ್ಲಿ ಜನರ ಪ್ರೀತಿ ವಿಶ್ವಾಸ ಸಿಕ್ಕಿದ್ದು, ಅಂದು ಸಿಕ್ಕಿರುವ ಬೆಂಬಲವನ್ನು ನಾನು ಜೀವನ ಪೂರ್ತಿ ಮರೆಯುವುದಿಲ್ಲ. ಜನರು ನಮಗೆ 104 ಕ್ಷೇತ್ರಗಳಲ್ಲಿ ಗೆಲ್ಲಿಸಿ ಅಭೂತಪೂರ್ವ ಬೆಂಬಲ ನೀಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ನ್ನು ತಿರಸ್ಕರಿಸಿದ್ದಾರೆ ಅಂತಾ ಭಾಷಣದ ಆರಂಭದಲ್ಲಿಯೇ ಎರಡೂ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ರು.

ಚುನಾವಣಾ ಪ್ರಚಾರದಲ್ಲಿ ಅವರಪ್ಪಾಣೆ, ನಿಮ್ಮಪ್ಪರಾಣೆ ಸಿಎಂ ಆಗಲ್ಲ ಅಂತಾ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಬಂದವರು ಇಂದು ಒಂದಾಗಿದ್ದಾರೆ. ಹಿಂದಿನ ಸರ್ಕಾರದ ವೈಫಲ್ಯತೆಯಿಂದಾಗಿ ಕರುನಾಡ ಜನರು ಕಾಂಗ್ರೆಸ್‍ನ್ನು ತಿರಸ್ಕರಿಸಿದ್ದಾರೆ. ಜನಾದೇಶದ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ನನ್ನ ಕೊನೆಯುಸಿರು ಇರೋವರೆಗೂ ನಾನು ರೈತರಿಗಾಗಿ ಹೋರಾಡುತ್ತಿರುತ್ತೇನೆ. ರಾಜ್ಯದಲ್ಲಿಯ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ರೈತರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡಲು ನಾನು ತೀರ್ಮಾನಿಸಿದ್ದೆ. ಕಳೆದ 5 ವರ್ಷಗಳಲ್ಲಿ ನಾನು ರಾಜಕೀಯ ಏಳು ಬೀಳುಗಳನ್ನು ಕಂಡಿದ್ದೇನೆ ಅಂತಾ ಹೇಳುವ ಮೂಲಕ ಭಾವುಕರಾದರು.

ಯಾರ ಹಿಂದೆಯೋ ನಾನು ರಾಜಕೀಯ ಮಾಡಿಲ್ಲ. ರಾಜ್ಯದ ಜನರ ಸೇವೆ ಮಾಡ್ಬೇಕು, ರೈತರನ್ನು ಉಳಿಸಬೇಕು ಎಂಬ ಹಂಬಲ ನನ್ನಲಿದೆ. ಮುಂದಿನ ದಿನಗಳಲ್ಲಿಯೂ ನನ್ನ ಹೋರಾಟ ಮುಂದುವರೆಯುತ್ತದೆ. ನಮ್ಮ ರಾಜ್ಯದಲ್ಲಿ ಎಲ್ಲ ಸಂಪನ್ಮೂಲಗಳು ನಮ್ಮಲಿವೆ. ಆದ್ರೆ ಸದುಪಯೋಗ ಮಾಡಿಕೊಳ್ಳುವರ ಇಲ್ಲ. ಇಂದು ನನ್ನ ಪಾಲಿಗೆ ಅಗ್ನಿ ಪರೀಕ್ಷೆ ಇದ್ದಂತೆ ಕಾಣುತ್ತಿದೆ. ನಾನು ನನ್ನ ಜೀವನದುದ್ದಕ್ಕೂ ಹಲವ ಅಗ್ನಿ ಪರೀಕ್ಷೆಗಳನ್ನು ಎದುರಿಸಿದ್ದೇನೆ ಎಂದರು.

ರಾಜ್ಯದ ಜನರು 113 ಸ್ಥಾನಗಳನ್ನು ನಿಮಗೆ ನೀಡಿದ್ರೆ ಇಡೀ ಕರ್ನಾಟಕದ ಚಿತ್ರಣವೇ ಬದಲಾಗುತ್ತಿತ್ತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಿಸಿಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡುಗೆಯನ್ನು ನೀಡುತ್ತೇವೆ. ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಬಿಜೆಪಿ ಅಧಿಕಾರಕ್ಕೆ ಏರಲಿದೆ. ಅಧಿಕಾರದಲ್ಲಿ ಇರಲಿ ಅಥವಾ ವಿರೋಧ ಪಕ್ಷದಲ್ಲಿರಲಿ ಜನರ ಸೇವೆ ಮಾಡುತ್ತೇನೆ. ರಾಜಭವನಕ್ಕೆ ತೆರಳಿ ನನ್ನ ರಾಜಿನಾಮೆ ಸಲ್ಲಿಸುತ್ತೇನೆ. ಮುಂದಿನ 5 ವರ್ಷಗಳಲ್ಲಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *