ಮುಬೈ: ಷೇರು ಮಾರುಕಟ್ಟೆಯಲ್ಲಿ (Share Market) ಶುಕ್ರವಾರದ ವಹಿವಾಟು ಐಟಿ ಹೂಡಿಕೆದಾರರಿಗೆ ಭಾರಿ ಆಘಾತ ನೀಡಿದ್ದು 2 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ.
ಜಾಗತಿಕ ಮಾಹಿತಿ ತಂತ್ರಜ್ಞಾನ (IT) ಮತ್ತು ಕನ್ಸಲ್ಟಿಂಗ್ ದೈತ್ಯ ಕಂಪನಿ ಆಕ್ಸೆಂಚರ್ (Accenture) ಬಿಡುಗಡೆ ಮಾಡಿರುವ ನಿರಾಶಾದಾಯಕ ಮುನ್ಸೂಚನೆಯು ತಲ್ಲಣ ಮೂಡಿಸಿದ್ದು, ಐಟಿ ವಲಯದ ಷೇರುಗಳು ರಕ್ತಪಾತ (Bloodbath) ಕಂಡಿವೆ.
ಆಕ್ಸೆಂಚರ್ ವರದಿಯ ಎಫೆಕ್ಟ್‌ನಿಂದಾಗಿ ಭಾರತದ ಪ್ರಮುಖ ಐಟಿ ದೈತ್ಯ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ಇನ್ಫೋಸಿಸ್ (Infosys), ಎಚ್‌ಸಿಎಲ್‌ಟೆಕ್ (HCLTech), ಟೆಕ್ ಮಹೀಂದ್ರಾ (Tech Mahindra) ಮತ್ತು ವಿಪ್ರೋ (Wipro) ಕಂಪನಿಗಳ ಷೇರು ಮೌಲ್ಯ ಶೇ. 3.3% ರಿಂದ ಶೇ. 6% ರವರೆಗೆ ಭಾರೀ ಇಳಿಕೆಯಾಗಿದೆ.
ನಿಫ್ಟಿ 500 ಇಂಡೆಕ್ಸ್‌ನಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದ ಮೊದಲ 15 ಕಂಪನಿಗಳಲ್ಲಿ ಎಲ್ಲವೂ ಐಟಿ ವಲಯದ ಕಂಪನಿಗಳೇ ಆಗಿರುವುದು ಮಾರುಕಟ್ಟೆಯ ಆತಂಕದ ತೀವ್ರತೆಯನ್ನು ತೋರಿಸುತ್ತದೆ.
ಆಕ್ಸೆಂಚರ್ ವರದಿಯಲ್ಲಿ ಏನಿದೆ?
ಆಕ್ಸೆಂಚರ್ ಕಂಪನಿಯು ತನ್ನ ವಾರ್ಷಿಕ ಆದಾಯದ ಬೆಳವಣಿಗೆಯ ಅಂದಾಜನ್ನು (Revenue Growth Guidance) ಈ ಹಿಂದೆ ಇದ್ದ ಶೇ. 3-5 ರಿಂದ ಶೇ. 3-4 ಕ್ಕೆ ಇಳಿಸಿದೆ. ಇದರೊಂದಿಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಗ್ಗೆ ಜಾಗತಿಕವಾಗಿ ಭಾರಿ ಸದ್ದು ಕೇಳಿಬರುತ್ತಿದ್ದರೂ ಕಂಪನಿ ತಮ್ಮ ತಂತ್ರಜ್ಞಾನ ಬಜೆಟ್ ಅನ್ನು ವಿಸ್ತರಿಸುತ್ತಿಲ್ಲ. ಬದಲಿಗೆ ಹಳೆಯ ಬಜೆಟ್‌ನ್ನೇ ಎಐ ಕಡೆಗೆ ಮರುಹಂಚಿಕೆ ಮಾಡಲಾಗುವುದು ಎಂದು ಆಕ್ಸೆಂಚರ್ ಮ್ಯಾನೇಜ್‌ಮೆಂಟ್ ಸ್ಪಷ್ಟಪಡಿಸಿದೆ. ಇದು ಐಟಿ ವಲಯದಲ್ಲಿ ಹೊಸ ಬೇಡಿಕೆ ಸೃಷ್ಟಿಯಾಗುತ್ತಿಲ್ಲ ಎಂಬುದನ್ನು ತೋರಿಸುತ್ತಿದೆ. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಕಳ್ಳತನ – ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ರೂ ಕ್ರಮ ನಿಶ್ಚಿತ: ಸಿಎಂ ಯೋಗಿ ಎಚ್ಚರಿಕೆ

ಔಟ್‌ಸೋರ್ಸಿಂಗ್ ಬುಕ್ಕಿಂಗ್ ಕುಸಿತ
ಭಾರತೀಯ ಐಟಿ ಕಂಪನಿಗಳ ಬೆನ್ನೆಲುಬಾಗಿರುವ ಔಟ್‌ಸೋರ್ಸಿಂಗ್’ (Outsourcing) ವ್ಯವಹಾರದ ಬುಕಿಂಗ್‌ನಲ್ಲಿ ಆಕ್ಸೆಂಚರ್ ಶೇ. 15 ರಷ್ಟು ಕುಸಿತ ಕಂಡಿದೆ. ಇದರ ಜೊತೆಗೆ ಮಧ್ಯಪ್ರಾಚ್ಯದಲ್ಲಿ (Middle East) ಉಂಟಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಪ್ರಾದೇಶಿಕ ವ್ಯವಹಾರದಲ್ಲಿ ಕಂಪನಿಗೆ 400 ಮಿಲಿಯನ್ ಡಾಲರ್ ನಷ್ಟವಾಗಿದೆ.
ಜಾಗತಿಕ ಕಂಪನಿಗಳು ಸಾಂಪ್ರದಾಯಿಕ ಐಟಿ ವೆಚ್ಚಗಳನ್ನು ಕಡಿತಗೊಳಿಸುತ್ತಿರುವುದು ಇನ್ಫೋಸಿಸ್ ಮತ್ತು ವಿಪ್ರೋದಂತಹ ಭಾರತೀಯ ಸಂಸ್ಥೆಗಳಿಗೆ ಮುಂದಿನ ದಿನಗಳಲ್ಲಿ ದೊಡ್ಡ ಸವಾಲಾಗಲಿದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.
ಈ ನಕಾರಾತ್ಮಕ ಪರಿಣಾಮ ಕೇವಲ ಭಾರತಕ್ಕೆ ಸೀಮಿತವಾಗಿರದೆ ವಾಲ್ ಸ್ಟ್ರೀಟ್‌ನಲ್ಲೂ ಪ್ರತಿಫಲಿಸಿದೆ. ನ್ಯೂಯಾರ್ಕ್‌ನಲ್ಲಿ ಆಕ್ಸೆಂಚರ್ ಷೇರುಗಳು ಶೇ. 15 ರಷ್ಟು ಕುಸಿದರೆ, ಇನ್ಫೋಸಿಸ್ ಎಡಿಆರ್ (ADR) ಶೇ. 10 ರಷ್ಟು ಮತ್ತು ವಿಪ್ರೋ ಎಡಿಆರ್ ಶೇ. 7 ಕ್ಕಿಂತ ಹೆಚ್ಚು ಕುಸಿತ ಕಂಡಿವೆ.
ಸಿಟಿ (Citi), ಜೆಫರೀಸ್ (Jefferies) ಮತ್ತು ನೋಮುರಾ (Nomura) ದಂತಹ ಪ್ರಮುಖ ಬ್ರೋಕರೇಜ್ ಸಂಸ್ಥೆಗಳು ಭಾರತೀಯ ಐಟಿ ವಲಯದ ಕುರಿತು ಜಾಗರೂಕತೆಯಿಂದ ಇರುವಂತೆ ಹೂಡಿಕೆದಾರರಿಗೆ ಸಲಹೆ ನೀಡಿವೆ.
ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್(Sensex) 607.08 ಅಂಕ ಕುಸಿದು 76,802.90 ರಲ್ಲಿ ವ್ಯವಹಾರ ಮುಗಿಸಿತು. ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ(Nifty) 154 ಅಂಕ (ಶೇ.0.64) ಕುಸಿದು 24,013.10 ರಲ್ಲಿ ವ್ಯವಹಾರ ಮುಗಿಸಿತು.
