ಬಿಗ್ಬಾಸ್ ಗೆದ್ದು ಐದು ತಿಂಗಳ ನಂತರ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಗಿಲ್ಲಿ ನಟ. ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೇ ಅವರಿಗೆ ನಾಯಕ ನಟನಾಗುವ ಆಫರ್ಗಳು ಬಂದಿದ್ದವು. ಆದರೆ, ಐದು ತಿಂಗಳ ಕಾಲ ಅವರು ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಕಥೆ ಕೇಳಿದ್ದೇನೆ, ನಿರ್ಮಾಪಕರು ಭೇಟಿ ಆಗಿದ್ದಾರೆ. ನಿರ್ದೇಶಕರು ಮನೆಗೆ ಬಂದಿದ್ದರು ಅಂತ ಹೇಳುತ್ತಲೇ ಇದ್ದರು. ಆದರೆ, ಸಿನಿಮಾ ಒಪ್ಪಿಕೊಂಡ ಕುರಿತು ಒಂದೇ ಒಂದು ಮಾತನ್ನೂ ಆಡಿರಲಿಲ್ಲ. ಇದೀಗ ಸ್ವತಃ ನಿರ್ಮಾಣ ಸಂಸ್ಥೆಯೇ ಗಿಲ್ಲಿ ನಟನ ಹೊಸ ಸಿನಿಮಾದ ಬಗ್ಗೆ ಮಾಹಿತಿ ಕೊಟ್ಟಿದೆ. ಜೂನ್ 21ರಂದು ಗಿಲ್ಲಿ ನಟ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಚಿತ್ರಕ್ಕೆ ಚಾಲನೆ ಸಿಗಲಿದೆ. ಅಚ್ಚರಿ ಅಂದರೆ ಈವರೆಗೂ ಮೊದಲ ಚಿತ್ರಕ್ಕೆ ಯಾವ ನಟರೂ ಪಡೆಯದೇ ಇರುವಷ್ಟು ಸಂಭಾವನೆಯನ್ನು ಗಿಲ್ಲಿ ಪಡೆದಿದ್ದಾರಂತೆ.

ಇವತ್ತು ಗಿಲ್ಲಿ ಬೆಳ್ಳಿತೆರೆಯ ನಾಯಕನಾಗುತ್ತಿದ್ದಾನೆ ಅಂದರೆ, ಅದು ಸುಲಭಕ್ಕೆ ದಕ್ಕಿದ್ದಲ್ಲ. ಅದರ ಹಿಂದೆ ರೋಚಕ ಜರ್ನಿಯೇ ಇದೆ. ಅವಮಾನವಿದೆ, ಹತಾಶೆಯಿದೆ. ಉಪವಾಸವಿದ್ದ ದಿನಗಳೂ ಇವೆ. ಈ ಎಲ್ಲ ಪರೀಕ್ಷೆಯ ಅಗ್ನಿಕುಂಡದಲ್ಲಿ ಹಾದೇ ಗಿಲ್ಲಿ ಬಂದಿದ್ದಾರೆ. ಅವಕಾಶಗಳ ಜೊತೆ ಅದೃಷ್ಟವೂ ಅವರ ಜೊತೆಗಿದ್ದ ಕಾರಣದಿಂದಾಗಿ ಇವತ್ತು ಫುಟ್ಪಾತ್ನಿಂದ ಉಪ್ಪರಿಗೆ ಏರಿದ್ದಾರೆ. ಹಾಗಾಗಿ ಇಡೀ ಕರುನಾಡೇ ಕೊಂಡಾಡುತ್ತಿದೆ. ಗಿಲ್ಲಿ ನಮ್ ಹುಡುಗ ಅಂತ ಪ್ರೀತಿಯಿಂದ ಕರೆಯುತ್ತಿದೆ. ಅಂದು ಪುಟ್ಟದೊಂದು ಪಾತ್ರಕ್ಕಾಗಿ ದಿನವೀಡಿ ಕಾದು ಕುಳಿತಿದ್ದ ಹುಡುಗನಿಗೆ ಇವತ್ತು ನಾಯಕನನ್ನಾಗಿ ಪಟ್ಟಾಭಿಷೇಕ ಮಾಡಲಾಗುತ್ತಿದೆ.

ಇವತ್ತು ಗಿಲ್ಲಿ ಬೆಳ್ಳಿ ತೆರೆಗೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ ಅಂದರೆ, ಅದರ ಹಿಂದೆ ಕಾಮಿಡಿ ರಿಯಾಲಿಟಿ ಶೋಗಳ ಕೊಡುಗೆ ಸಾಕಷ್ಟಿದೆ. ಗಿಲ್ಲಿ ಬಿಗ್‌ಬಾಸ್‌ಗೆ ಹೋಗೋದಕ್ಕೆ ಕಾರಣ ಕೂಡ ಕಾಮಿಡಿ ರಿಯಾಲಿಟಿ ಶೋಗಳು. ಕೊರೊನಾ ನಂತರ ಗಿಲ್ಲಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾರೆ. ಅಲ್ಲಿಂದ ಗಿಲ್ಲಿ ಹಿಂದಿರುಗಿ ನೋಡುವುದೇ ಇಲ್ಲ. ಒಂದರ ಹಿಂದೊಂದು ರಿಯಾಲಿಟಿ ಶೋಗಳಲ್ಲಿ ಭಾಗಿ ಆಗುತ್ತಾರೆ. ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಭರ್ಜರಿ ಬ್ಯಾಚುಲರ್ ಹೀಗೆ ಶೋಗಳಲ್ಲಿ ಭಾಗಿಯಾಗಿ ಸಾರ್ವಜನಿಕ ಮನ್ನಣೆ ಗಳಿಸುತ್ತಾರೆ. ಆ ಮನ್ನಣೆಯೇ ಬಿಗ್ಬಾಸ್ ಮನೆಗೆ ಹೋಗುವಂತೆ ಮಾಡುತ್ತದೆ. ಈಗ ನಾಯಕ ನಟನಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿರುವುದೇ ಅದೇ ಮನ್ನಣೆಯಿಂದಲೇ.

ಬಿಗ್ಬಾಸ್ ವಿನ್ ಆದ ನಂತರ ಗಿಲ್ಲಿ ನಟನ ಅದೃಷ್ಟವೇ ಬದಲಾಯಿತು. ಲಕ್ಷಾಂತರ ಜನರು ಅಭಿಮಾನಿಗಳು ಆದರು. ಗಿಲ್ಲಿ ಹೋದ ಕಡೆಯಲ್ಲ ಜನಸಾಗರವೇ ಹರಿದು ಬರುತ್ತಿತ್ತು. ಬಿಗ್‌ಬಾಸ್ ಮುಗಿದು ಐದು ತಿಂಗಳು ಗತಿಸಿದರೂ, ಅಭಿಮಾನಿಗಳ ಅಭಿಮಾನ ಮಾತ್ರ ಕರಗಿಲ್ಲ. ಹಾಗಾಗಿ ಸಿನಿಮಾ ರಂಗ ಗಿಲ್ಲಿ ಬೆನ್ನು ಹಿಂದೆ ಬಿದ್ದಿತ್ತು. ಅನೇಕ ನಿರ್ಮಾಪಕರು, ನಿರ್ದೇಶಕರು ಗಿಲ್ಲಿಯನ್ನು ಭೇಟಿ ಮಾಡಿ ಕಾಲ್‌ಶೀಟ್ ಕೇಳಿದರು. ಕೊನೆಗೂ ಚಂದ್ರ ಮೋಹನ್ ಕಾಲ್ಶೀಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಕಾಮಿಡಿ ಸಿನಿಮಾದ ಜೊತೆಗೆ ಗಿಲ್ಲಿ ನಾಯಕನಾಗಿ ಸಿನಿಮಾ ರಂಗ ಪ್ರವೇಶ ಮಾಡುತ್ತಿದ್ದಾರೆ. ಆ ಪಾತ್ರ ಮಾಡುವುದಕ್ಕಾಗಿ ಗಿಲ್ಲಿ ಪಡೆದ ಸಂಭಾವನೆ ಅಚ್ಚರಿ ಮೂಡಿಸುವಂತಿದೆ. ಅಷ್ಟೊಂದು ಸಂಭಾವನೆನಾ? ಅಂತ ಹುಬ್ಬೇರಿಸಿ ಕೇಳುವಂತದ್ದು ಆಗಿದೆ.
ಜೂನ್ 21 ಗಿಲ್ಲಿ ನಟನ ಹುಟ್ಟು ಹಬ್ಬ. ಅವತ್ತೇ ಚಿತ್ರಕ್ಕೆ ಚಾಲನೆ ಸಿಗಲಿದೆ. ಈ ಚಿತ್ರಕ್ಕೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಸಾಥ್ ನೀಡುತ್ತಿರುವುದರಿಂದ ಭಾರೀ ಮೊತ್ತವನ್ನೇ ಗಿಲ್ಲಿಗೆ ನೀಡಲಾಗಿದೆಯಂತೆ. ಹೌದು. ಆಪ್ತರು ಹೇಳುತ್ತಿರುವ ಪ್ರಕಾರ ಮೊದಲ ಚಿತ್ರಕ್ಕೆ ಗಿಲ್ಲಿ ನಟ ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದೆರಡು ತಾಸಿನ ಇವೆಂಟ್‌ಗಳಲ್ಲಿ ಭಾಗಿ ಆಗೋಕೆ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಿದ್ದ ಗಿಲ್ಲಿ, ಸಿನಿಮಾಗೆ ಪಡೆದದ್ದು ಕಡಿಮೆನೆ ಅನ್ನುವ ಮಾತುಗಳನ್ನೂ ಅವರ ಅಭಿಮಾನಿಗಳು ಆಡುವಂತಾಗಿದೆ. ಅದೇನೆ ಇರಲಿ, ಮೊದಲ ಚಿತ್ರಕ್ಕೆ ಕೋಟಿ ಸಂಭಾವನೆ ಪಡೆದ ಮೊದಲು ನಾಯಕ ಗಿಲ್ಲಿನಾ? ಅನ್ನುವ ಮಾಹಿತಿಯನ್ನು ಹುಡುಕಬೇಕಾಗಿದೆ. ಕೋಟಿ ವಿಚಾರವನ್ನು ಅಧಿಕೃತವಾಗಿ ಯಾರೂ ಹೇಳಿಲ್ಲವಾದರೂ, ಆಪ್ತರ ಮಾತುಕತೆಯಲ್ಲಿ ಕೇಳಿ ಬಂದಿದ್ದು ಸತ್ಯ.
